

ಮೈಸೂರು: ಶೀಘ್ರದಲ್ಲೇ ಮೂರ್ನಾಲ್ಕು ಜನ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ. ದೆಹಲಿ ನಾಯಕರ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ತಿಕ ಮಾಸ ಮುಗಿದು ಇದೀಗ ಧನುರ್ಮಾಸ ಆರಂಭವಾಗುತ್ತಿದೆ. ಹೈಕಮಾಂಡ್ ಭೇಟಿ ವೇಳೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಏನೆಲ್ಲಾ ಬೆಳವಣಿಗೆ ಆಯಿತು ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಕೆಲ ಬಿಜೆಪಿ ನಾಯಕರ ಸೋಲಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಕಾರಣ ಎಂಬ ವಿಚಾರ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ವಿ.ಸೋಮಣ್ಣ, ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಏನು ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಮತ್ತೆ ಅದೇ ವಿಚಾರ ಮಾತನಾಡುವುದು ಬೇಡ. ನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯೂ ಅಲ್ಲ. ಆದರೆ, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.
ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರಿಗೆ ಔತಣಕೂಟಕ್ಕೆ ಆಹ್ವಾನ ಇತ್ತು. ಹಾಗಾಗಿ ಅವರು ಹೋಗಿದ್ದಾರೆ. ಇಬ್ಬರೂ ಈ ಮೊದಲು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು. ಊಟಕ್ಕೆ ಹೋದಾಕ್ಷಣ ಅವರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂದು ಅರ್ಥವಲ್ಲ ಎಂದರು.
ನೀವು ಬಿಜೆಪಿ ತೊರೆಯುತ್ತೀರಾ? ಎಂಬ ಪ್ರಶ್ನೆಗೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.