

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯುಗಲ ದಿಗಂಬರ ಮುನಿಗಳಾದ ಶ್ರೀ ಅಮೋಘಕೀರ್ತಿ ಮಹಾರಾಜ ಮತ್ತು ಶ್ರೀ ಅಮರಕೀರ್ತಿ ಮಹಾರಾಜರ ಸಾನಿಧ್ಯದಲ್ಲಿ ಏ. 19ರಂದು 24ನೇ ತೀರ್ಥಂಕರ ಶ್ರೀ ಮಹಾವೀರರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಹುಬ್ಬಳ್ಳಿ ದಿಗಂಬರ ಜೈನ ಸಮಾಜ ನಿರ್ಧರಿಸಿದೆ.
ದಕ್ಷಿಣ ಕರ್ನಾಟಕದ ವಿಹಾರ ಮುಗಿಸಿ ಮುನಿದ್ವಯರು 19ರಂದು ಹುಬ್ಬಳ್ಳಿ ಮಹಾನಗರಕ್ಕೆ ಮಂಗಲ ಪ್ರವೇಶ ಮಾಡಲಿದ್ದು, ಬೆಳಗ್ಗೆ 8 ಗಂಟೆಗೆ ಬಂಕಾಪುರ ಚೌಕ ಜಿಗಳೂರ ಬಿಲ್ಡಿಂಗ್ ಬಳಿ ಮಂಗಲ ಕುಂಭ, ಮಂಗಲ ವಾದ್ಯಸಹಿತ ಪಾದಪೂಜೆಯೊಂದಿಗೆ ಅವರನ್ನು ಬರಮಾಡಿಕೊಂಡು ಶಾಂತಿನಾಥ ಭವನಕ್ಕೆ ಕರೆತರಲಾಗುವುಸು. 9.30ಕ್ಕೆ ಮುನಿಶ್ರೀಗಳಿಂದ ಮಂಗಲ ಪ್ರವಚನ ನಡೆಯುವುದು.
ಸಂಜೆ 6 ಘಂಟೆಗೆ ಶಾಂತಿನಾಥ ಭವನದಲ್ಲಿ ಮುನಿಶ್ರೀಗಳಿಂದ ಪುನಃ ಮಂಗಲ ಪ್ರವಚನ, ಸಂಜೆ 7ಕ್ಕೆ ಜಿನಭಕ್ತಿಗೀತೆಗಳ ಅಂತ್ಯಾಕ್ಷರಿ ಹಾಗೂ ಭಕ್ತಿಸಂಜೆ ಕಾರ್ಯಕ್ರಮ ನಡೆಯಲಿದ್ದು, ಮೂಡುಬಿದರೆಯ ಜೈನ್ ಬೀಟ್ಸ್ ಸಂಸ್ಥಾನದ ಸರ್ವೆಶ ಜೈನ, ಸೌಮ್ಯ ಜೈನ ಕಾರ್ಯಕ್ರಮ ಪ್ರಸ್ತುತಪಡಿಸುವರು.
20ರಂದು ಸಂಜೆ 6ಕ್ಕೆ ರಾಜೇಂದ್ರ ಬೀಳಗಿ ಅಧ್ಯಕ್ಷತೆಯಲ್ಲಿ ನಡೆಯುವ ಮುನಿಗಳ ಪ್ರವಚನ ಸಭಾ ಕಾರ್ಯಕ್ರಮವನ್ನು ಸಂತೋಷ ಮುರಗಿ ಪಾಟೀಲ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಸಮಾಜದ ಮೂವರು ಭಾಗ್ಯಶಾಲಿ ಶ್ರಾವಕ, ಶ್ರಾವಕಿಯರನ್ನು ಆಯ್ಕೆ ಮಾಡಿ ಅವರಿಗೆ ರಜತ ಮಹಾವೀರ ಜಿನಬಿಂಬಗಳೊಂದಿಗೆ ಸನ್ಮಾನಿಸಲಾಗುವುದು. ಸಮಾಜದ ದಾನಿಗಳನ್ನು ಗೌರವಿಸಲಾಗುವುದು.
21ರಂದು ಬೆಳಿಗ್ಗೆ 6 ಗಂಟೆಗೆ ನಗರದ ಎಲ್ಲ ಬಸದಿಗಳಲ್ಲಿ ಲೋಕಶಾಂತಿ ಪ್ರಾರ್ಥನೆಯೊಂದಿಗೆ ಜಿನಬಿಂಬಗಳಿಗೆ ವಿಶೇಷ ಅಭಿಷೇಕ, ತೊಟ್ಟಿಲೋತ್ಸವ, ಹಳೇಹುಬ್ಬಳ್ಳಿಯ ಪ್ರಾಚೀನ ಶ್ರೀ ಅನಂತನಾಥ ಜಿನಮಂದಿರದಲ್ಲಿ ಧ್ವಜಾರೋಹಣ ಹಾಗೂ ಇಲ್ಲಿಂದಲೇ ತೀರ್ಥಂಕರರ ಮಹಾವೀರ ಜಿನಬಿಂಬ, ಭಾವಚಿತ್ರಗಳ ಮೆರವಣಿಗೆ ಹೊರಟು ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಶಾಂತಿನಾಥ ಭವನ ತಲುಪುವುದು. ಅಲ್ಲಿ ಮಧ್ಯಾಹ್ನ 12.30ಕ್ಕೆ ಸಾಮೂಹಿಕ ನಾಮಕರಣೋತ್ಸವ, ಮುನಿಗಳ ಮಂಗಲ ಪ್ರವಚನ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಹಾಗೂ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ ತಿಳಿಸಿದ್ದಾರೆ.