ನಿಮ್ಮ ಬದುಕನ್ನು ನೀವೇ ನಿರ್ಧರಿಸಿ : ಈಶ್ವರ ರಾವ್

jss college
Published on

ಮೈಸೂರು: ನಿಮ್ಮ ಬದುಕನ್ನು ನಿರ್ಧರಿಸುವವರು ನೀವೇ ಆಗಿದ್ದೀರಿ. ಮಹತ್ತಾಗಿ ಯೋಚನೆ ಮಾಡಿ, ಯೋಚನೆಗಳನ್ನು ಯೋಜನೆಗಳಾಗಿ ಪರಿವರ್ತಿಸಿ ಸಾಧಕರ ಸಾಲಿನಲ್ಲಿ ನಿಲ್ಲಿ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಈಶ್ವರ ರಾವ್ ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಇಂಟರ್ನ್‌ಶಿಪ್ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಪಂಚದ ಇಂದಿನ ದೃಷ್ಟಿಕೋನ ಬದಲಾಗಿದೆ. ಅದಕ್ಕೆ ತಕ್ಕಂತೆ ನಿಮ್ಮಲ್ಲಿ ಸೂಕ್ಷ್ಮ ಗ್ರಹಿಕೆಗಳು ಇರಬೇಕು. ಗುರಿಯನ್ನು ಇಟ್ಟುಕೊಳ್ಳಿ. ಆ ಗುರಿಯನ್ನು ತಲುಪಲು ಸದಾ ಪ್ರಯತ್ನ ನಡೆಸಿ. ಮಧ್ಯಮ ವರ್ಗದಿಂದ ಬಂದವರು ದೊಡ್ಡ ಕನಸುಗಳನ್ನು ಕಾಣಬೇಕು. ಕನಸುಗಳನ್ನು ಈಡೇರಿಸಿಕೊಳ್ಳಲು ಶ್ರಮ ವಹಿಸಬೇಕು. ಆ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಸ್ಥಾನವನ್ನು ಕಂಡುಕೊಳ್ಳಿ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಆನಂದ್ ಮಾತನಾಡಿ, ಇದುವರೆಗೆ ಇಂಟರ್ನ್‌ಶಿಪ್ ಎಂಬುದು ಕೇವಲ ಕೆಲವೇ ಅಧ್ಯಯನ ಶಿಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇದನ್ನು ಎಲ್ಲ ಅಧ್ಯಯನ ಶಿಸ್ತುಗಳಿಗೂ ಅಳವಡಿಸಲಾಗಿದೆ ಎಂದು ಹೇಳಿದರು.

ಹಿರಿಯ ವಿಜ್ಞಾನಿ ಡಾ.ಎಂ. ಧರ್ಮ ಪ್ರಸಾದ್ ಮಾತನಾಡಿ, ಇಂದು ಸಾಧನೆಗೆ ತಾಂತ್ರಿಕ ಕೌಶಲ್ಯ ಮತ್ತು ಮೃದು ಕೌಶಲ್ಯ ಎರಡೂ ಮುಖ್ಯವಾಗಿವೆ. ಸಂವಹನ, ನಾಯಕತ್ವಗುಣ ಮೊದಲಾದವುಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಸಮಸ್ಯೆಯನ್ನು ಗುರುತಿಸಬೇಕು. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಮಸ್ಯೆಯನ್ನು ಎಂದಿಗೂ ಸಮಸ್ಯೆಯಾಗಿಯೇ ಬಿಡಬಾರದು ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಉದ್ಯೋಗವಿಲ್ಲದವರನ್ನು ಯಾರೂ ಗುರುತಿಸುವುದಿಲ್ಲ. ಇಂದು ಜೀವನದಲ್ಲಿ ಯಶಸ್ಸು ಕಾಣಲು ಉದ್ಯೋಗದ ಅವಶ್ಯಕತೆ ಇದೆ. ಉತ್ತಮ ಉದ್ಯೋಗ ಬೇಕಾದರೆ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಅದಕ್ಕಾಗಿ ನಿಮ್ಮನ್ನು ಸಜ್ಜುಗೊಳಿಸಲು ಇಂಟರ್ನ್‌ಶಿಪ್‌ನಂತಹ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಸ್. ಪ್ರತಿಭಾ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಎನ್ ರಾಜೇಂದ್ರ ಪ್ರಸಾದ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net