ಅನ್ಯ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ಅಡ್ಡಿ

galate
ಯಲಬುರ್ಗಾ ತಾಲೂಕಿನ ಬಳೂಟಗಿ ತಾಂಡಾ ನಿವಾಸಿ ದೀಪಾಲೆಪ್ಪ ರಾಠೋಡ ಅಂತ್ಯಸಂಸ್ಕಾರ ವಿಚಾರಕ್ಕೆ ವಾಗ್ವಾದ ನಡೆದಿದ್ದು ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್‌ಐಗಳಾದ ವಿಜಯಪ್ರತಾಪ, ಪ್ರಶಾಂತ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Published on

ಯಲಬುರ್ಗಾ: ತಾಲೂಕಿನ ಬಳೂಟಗಿ ತಾಂಡಾ ನಿವಾಸಿ ದೀಪಾಲೆಪ್ಪ ರಾಠೋಡ (55) ನಿಧನರಾದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪ ಕೇಳಿ ಬಂದಿದ್ದು, ಮೃತನ ಪುತ್ರ ಮತ್ತು ತಾಂಡಾದ ಹಿರಿಯರ ನಡುವೆ ಶನಿವಾರ ವಾಗ್ವಾದ ನಡೆದಿದೆ.

ಪುತ್ರ ಹಂಪಣ್ಣ ರಾಠೋಡ ಮೃತ ತಂದೆಯ ಅಂತ್ಯಕ್ರಿಯೆ ನೆರವೇರಿಸಲು ಬಳೂಟಗಿ ತಾಂಡಾಕ್ಕೆ ಆಗಮಿಸಿದ್ದರು. ಮೃತ ವ್ಯಕ್ತಿಯ ಕುಟುಂಬ ಕ್ರೈಸ್ತ ಧರ್ಮದ ಅನುಯಾಯಿಗಿದ್ದು, ಆ ಧರ್ಮದ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಕೈಗೊಳ್ಳಲು ಗ್ರಾಮಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಸುದ್ದಿ ತಿಳಿದ ತಾಂಡಾದ ಹಿರಿಯರು, ದೀಪಾಲೆಪ್ಪ ಕುಟುಂಬ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದೆ. ಲಂಬಾಣಿ ಸಂಪ್ರದಾಯ ಪಾಲನೆ ಮಾಡಿದರೆ ಮಾತ್ರ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡುತ್ತೇವೆ. ಕ್ರೈಸ್ತ ಧರ್ಮದ ಪದ್ಧತಿಗೆ ತಾಂಡಾದಲ್ಲಿ ಅವಕಾಶ ಇಲ್ಲವೆಂದು ಹೇಳಿದಾಗ ಕೆಲ ಹೊತ್ತು ಮೃತನ ಪುತ್ರನೊಂದಿಗೆ ವಾಗ್ವಾದ ನಡೆದಿದೆ.

ಪುರಾವೆ ತೋರಿಸಲಿ?: ದಶಕದ ಹಿಂದೆ ನಮ್ಮ ಕುಟುಂಬ ಅನಾರೋಗ್ಯ, ಕೆಟ್ಟ ಪರಿಸ್ಥಿತಿ ಎದುರಿಸುತ್ತಿತ್ತು. ನಿವಾರಣೆಗೆ ಯೇಸುವಿನ ಮೊರೆ ಹೋಗಿದ್ದಕ್ಕೆ ನಮಗೆ ಒಳ್ಳೆಯದಾಗಿದೆ. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ. ಅನುಯಾಯಿಯಾಗಿದ್ದೇನೆ. ಅನಾರೋಗ್ಯದಿಂದ ನಮ್ಮ ತಂದೆ ತೀರಿದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದೆ. ಗಜೇಂದ್ರಗಡಿದಿಂದ ಕ್ರೈಸ್ತ ಧರ್ಮದ ಪಾದ್ರಿಗಳನ್ನು ಕರೆಯಿಸಿದ್ದು ನಿಜ. ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಹಿಂದು ಲಂಬಾಣಿ ಧರ್ಮದಲ್ಲಿವೆ. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಬಗ್ಗೆ ಪುರಾವೆ ತೋರಿಸಲಿ ಎಂದು ಹಂಪಣ್ಣ ರಾಠೋಡ ಗ್ರಾಮಸ್ಥರಿಗೆ ಸವಾಲು ಹಾಕಿದರು.

ಪೊಲೀಸ್ ಬಂದೋಬಸ್ತ್‌ನಲ್ಲಿ ಸಂಸ್ಕಾರ

ತಾಂಡಾ ನಿವಾಸಿಗಳು ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೃತನ ಪುತ್ರ ಹಂಪಣ್ಣ ಪಟ್ಟಣದ ಠಾಣೆಗೆ ಮೌಖಿಕ ದೂರು ನೀಡಿದ್ದರು. ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್‌ಐಗಳಾದ ವಿಜಯಪ್ರತಾಪ, ಪ್ರಶಾಂತ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಅಂತ್ಯಸಂಸ್ಕಾರಕ್ಕೆ ದಾರಿ ಮಾಡಿಕೊಟ್ಟಿತು. ಕ್ರೈಸ್ತ ಧರ್ಮದ ಪ್ರಕಾರ ಪ್ರಾರ್ಥನೆ ಸಲ್ಲಿಸಿ ವಿಧಿ ವಿಧಾನ ಕೈಗೊಳ್ಳಲಾಗಿದೆ. ಬಳಿಕ ಲಂಬಾಣಿ ಸಂಪ್ರದಾಯದಂತೆ ತಾಂಡಾದ ಹಿರಿಯರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಹಿರಿಯರಾದ ವೆಂಕಟೇಶ ಕಾರಬಾರಿ, ವೆಂಕಟೇಶ ಪೂಜಾರ, ಪರಸಪ್ಪ ರಾಠೋಡ, ಕೋಟೆಪ್ಪ ಪೂಜಾರ, ಗುಂಡಪ್ಪ ರಾಠೋಡ, ಮುತ್ತಣ್ಣ ಪಮ್ಮಾರ ಇತರರಿದ್ದರು.

ಪರಿಸ್ಥಿತಿ ತಹಬದಿಗೆ: ಮತಾಂತರ ಆರೋಪ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ಮತ್ತು ತಾಂಡಾದ ಹಿರಿಯರ ನಡುವಿನ ವಾಗ್ವಾದಿಂದ ತಾಂಡಾದಲ್ಲಿ ಅಶಾಂತಿ ನೆಲೆಸಿತ್ತು. ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಲಂಬಾಣಿ ಭಾಷೆ ಮತ್ತು ಸಂಪ್ರದಾಯ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಕಳೆದ 10 ವರ್ಷದಿಂದ ಹಂಪಣ್ಣ ರಾಠೋಡ ಬಳೂಟಗಿ ತಾಂಡಾ ತೊರೆದಿದ್ದಾರೆ. ಕ್ರೈಸ್ತ ಧರ್ಮದ ಸಂಪ್ರದಾಯಕ್ಕೆ ತಾಂಡಾದಲ್ಲಿ ಅವಕಾಶವಿಲ್ಲ. ಮೃತ ದೀಪಾಲೆಪ್ಪ ರಾಠೋಡ ಅವರ ಅಂತ್ಯಕ್ರಿಯೆ ಲಂಬಾಣಿ ಸಂಪ್ರದಾಯದಂತೆ ನಡೆಸುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಒಪ್ಪದಿದ್ದಾಗ ಗಲಾಟೆ ನಡೆದಿದೆ. ಅಂತ್ಯಕ್ರಿಯೆ ಬಳಿಕ ದೀಪಾಲೆಪ್ಪ ಕುಟುಂಬ ತಾಂಡಾ ತೊರೆದಿದೆ. ಅವರ ಕುಟುಂಬಕ್ಕೂ ತಾಂಡಾದ ಹಿರಿಯರಿಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ.ಶಿವಮೂರ್ತಿ ರಾಠೋಡಗೋರಸೇನಾ ತಾಲೂಕು ಅಧ್ಯಕ್ಷ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net