

ಲೋಕೇಶ್‌ಎಂ. ಐಹೊಳೆ, ಜಗಳೂರು
ಇದು ಜಿಲ್ಲೆಯಲ್ಲಿಯೇ ಬಹುದೊಡ್ಡ ಸದಸ್ಯರಿರುವ ಗ್ರಾಮ ಪಂಚಾಯಿತಿ. ಆದರೆ, ಇಂದಿಗೂ ಈ ಗ್ರಾಪಂಗೊಂದು ಕಟ್ಟಡವಿಲ್ಲ. ಕಟ್ಟಿರುವ ಕಟ್ಟಡ ಅರ್ಧಕ್ಕೆ ನಿಂತು ಬಹಿರ್ದೆಸೆ, ಅನೈತಿಕ ಚಟುವಟಿಕೆ, ಮದ್ಯಪ್ರಿಯರ, ಜೂಜುಕೋರರ ತಾಣವಾಗಿ ಮಾರ್ಪಟ್ಟಿದೆ.
ಬರೋಬ್ಬರಿ 27 ಮಂದಿ ಗ್ರಾಪಂ ಸದಸ್ಯರನ್ನು ಹೊಂದಿರುವ ತಾಲೂಕಿನ ಹನುಮಂತಾಪುರ ಗ್ರಾಪಂನ ವ್ಯಥೆಯ ಕತೆ ಇದು.
ಪ್ರಸ್ತುತ ಚಿಕ್ಕ ಕಟ್ಟಡವೊಂದರಲ್ಲಿ ಗ್ರಾಪಂ ಆಡಳಿತ ನಡೆಯುತ್ತಿದ್ದು, ಕಿಷ್ಕಿಂದೆಯಂತಿರುವ ಸ್ಥಳದಲ್ಲಿ ಅಧಿಕಾರಿ, ಸಿಬ್ಬಂದಿ, ಸದಸ್ಯರಿಗೆ ಕೂರಲು ಸ್ಥಳವೇ ಇಲ್ಲ. ಇಂದಿಗೂ ಕಚೇರಿ ಸಭೆ, ಸಮಾರಂಭ ಮಾಡಲು ಹತ್ತಿರದ ಶಾಲೆ ಆಶ್ರಯಿಸಬೇಕಾಗಿದೆ.
ಗ್ರಾಪಂ ಕಟ್ಟಡ ನಿರ್ಮಾಣಕ್ಕೆ 2008-09ನೇ ಸಾಲಿನಲ್ಲಿ ಚಾಲನೆ ನೀಡಲಾಗಿತ್ತು. ನರೇಗಾ, ತಾಪಂ ಅನುದಾನ ಸೇರಿದಂತೆ ವಿವಿಧ ಅನುದಾನ ಬಳಸಿ ಆರಂಭಿಸಿದ ಕಟ್ಟಡ ಆರ್‌ಸಿಸಿವರೆಗೂ ನಡೆಯಿತು. ನಂತರ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿತು.
ಅಂದಿನಿಂದ ಈತನಕ ಕಟ್ಟಡ ಕಾಮಗಾರಿ ಅಭಿವೃದ್ಧಿಗೊಂಡಿಲ್ಲ. ಇದರಿಂದ ಕಟ್ಟಡದ ಕಬ್ಬಿಣದ ರಾಡುಗಳು ತುಕ್ಕು ಹಿಡಿಯುತ್ತಿವೆ, ಇಟ್ಟಿಗೆ, ಸಿಮೆಂಟ್ ಪುಡಿಯಾಗಿ ಉದುರಿ ಅಪಾಯದಂಚಿಗೆ ತಲುಪಿದೆ.
ಕಳೆದ ಹದಿನೈದು ವರ್ಷಗಳಿಂದಲೂ ನೆನಗುದಿಗೆ ಬಿದ್ದಿರುವ ಕಟ್ಟಡದ ಸುತ್ತಮುತ್ತ ಜಾಲಿ ಗಿಡ, ಮರಗಳು ಬೆಳೆದಿವೆ. ಇದರಿಂದಾಗಿ ಬಹಿರ್ದೆಸೆಗೆ ಸೂಕ್ತ ಸ್ಥಳವಾಗಿದ್ದು, ಮದ್ಯಪ್ರಿಯರಿಗೆ, ಜೂಜುಗಾರರು, ಸೋಮಾರಿಗಳ ಅಡ್ಡವಾಗಿರುವ ಜತೆಗೆ ಅನೈತಿಕ ಚಟುವಟಿಕೆಯ ತಾಣವಾಗಿದೆ.
ಇನ್ನಾದರೂ ಹನುಮಂತಾಪುರ ಗ್ರಾಪಂ ಕಟ್ಟಡದ ದುಸ್ತಿತಿಯ ಬಗ್ಗೆ ಶಾಸಕ ದೇವೇಂದ್ರಪ್ಪ ಅವರು, ಕಾಳಜಿ ವಹಿಸಿ ಕಟ್ಟಡ ಪೂರ್ಣಗೊಳಿಸಿದರೆ ಗ್ರಾಪಂ ಆಡಳಿತಕ್ಕೆ ಸಹಕಾರಿಯಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಪಂಚಾಯಿತಿ ಕಟ್ಟಡ ಕಾಮಗಾರಿ ನೆನಗುದಿಗೆ ಬಿದ್ದಿರುವ ಬಗ್ಗೆ ನನ್ನ ಗಮನಕ್ಕಿಲ್ಲ. ಇಒ ಅವರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುವೆ. ಈಗಾಗಲೇ ಹರಿಹರ, ಚನ್ನಗಿರಿ, ಹೊನ್ನಾಳಿ ಎಲ್ಲ ತಾಲೂಕುಗಳಲ್ಲಿ ಪಂಚಾಯಿತಿ ಕಟ್ಟಡ ದುರಸ್ತಿಗೆ ಕಮಿಷನರ್ ರಾಜ್ ಪಂಚಾಯತ್ ಯೋಜನೆಯಡಿ 20 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಜತೆಗೆ ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ಸುರೇಶ್ ಇಟ್ನಾಳ್, ಸಿಇಒ ದಾವಣಗೆರೆ
ಸುರೇಶ್ ಇಟ್ನಾಳ್, ಸಿಇಒ ದಾವಣಗೆರೆ