

ಮೈಸೂರು: ಹೊರವರ್ತುಲ ರಸ್ತೆಯ ಬದಿ ಬಿದ್ದಿರುವ ಡೆಬ್ರಿಸ್ ಮತ್ತು ಕಸದ ರಾಶಿ ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಸ್ವಾಗತಿಸುತ್ತಿದೆ. ಇದರಿಂದ ದೇಶದಲ್ಲಿಯೇ ಸ್ವಚ್ಛ ನಗರಿಯ ಪಟ್ಟ ಪಡೆದ ಮೈಸೂರು ಇದೇನಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.
41 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಸಾಗುವವರಿಗೆ ಇಂತಹದೊಂದು ಅನಿಸಿಕೆ ಮನಸ್ಸಿನಲ್ಲಿ ಬಂದು ಹೋಗುತ್ತಿದೆ. ಇದು ತಿಪ್ಪೆಗುಂಡಿಯಾಗಿ ಪರಿವರ್ತನೆಗೊಂಡಿದೆ. ಸ್ವಚ್ಛನಗರಿ ಎಂಬ ಹಿರಿಮೆ ಪಡೆದಿರುವ ಮೈಸೂರಿನ ಸೌಂದರ್ಯಕ್ಕೆ ನಿಜಕ್ಕೂ ಕಪ್ಪುಚುಕ್ಕೆಯಾಗಿದೆ. ಮನೆ, ಹೋಟೆಲ್, ವಾಣಿಜ್ಯ ಕೇಂದ್ರಗಳಲ್ಲಿ ಉತ್ಪಾದನೆಯಾಗುವ ಕಸಕ್ಕಿಂತ ಕಟ್ಟಡ ತ್ಯಾಜ್ಯ(ಡೆಬ್ರಿಸ್) ಇಲ್ಲಿ ಅಧಿಕ ಪ್ರಮಾಣದಲ್ಲಿದೆ. ಸಾರ್ವಜನಿಕರು ಹಾಗೂ ಖಾಸಗಿ ವ್ಯಕ್ತಿಗಳು ಲೋಡ್‌ಗಟ್ಟಲೆ ತಂದು ಡೆಬ್ರಿಸ್ ಸುರಿಯುತ್ತಿದ್ದಾರೆ.