ಸ್ವಚ್ಛ ನಗರಕ್ಕೆ ಕಪ್ಪು ಚುಕ್ಕೆ ಡೆಬ್ರಿಸ್ ತ್ಯಾಜ್ಯ

images (1)
Published on

ಆರ್.ಕೃಷ್ಣ ಮೈಸೂರು

ಸ್ವಚ್ಛಗೊಂಡಿದ್ದ ನಗರದ ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ಮತ್ತೆ ಡೆಬ್ರಿಸ್, ಕಸ ಕೊಂಪೆ ನಿರ್ಮಾಣಗೊಳ್ಳುತ್ತಿದೆ.
ನಿತ್ಯ ಸಾವಿರಾರು ಪ್ರವಾಸಿಗರು ಬರುವ ನಗರ ಎರಡು ಬಾರಿ ದೇಶದಲ್ಲಿಯೇ ಸ್ವಚ್ಛನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ ರಿಂಗ್ ರಸ್ತೆಯಲ್ಲಿ ಬರುವ ಪ್ರವಾಸಿಗರಿಗೆ ಸ್ವಚ್ಛ ನಗರಿ ಇದೆಯಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ಈ ಹಿಂದೆಯೂ ರಿಂಗ್ ರಸ್ತೆ ಸೇರಿದಂತೆ ಖಾಲಿ ನಿವೇಶನಗಳಲ್ಲಿ ಹಾಕುತ್ತಿದ್ದ ಕಸವನ್ನು ನಗರಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಚರಣೆ ನಡೆಸಿ ಸುಮಾರು 80 ಟನ್ ನಷ್ಟು ಕಸವನ್ನು ವಿಲೇವಾರಿ ಮಾಡಿದ್ದರು.
ಅಲ್ಲದೇ ರಿಂಗ್ ರಸ್ತೆ ಸೇರಿದಂತೆ ಖಾಲಿ ನಿವೇಶನದಲ್ಲಿ ಎಲ್ಲೆಂದರಲ್ಲಿ ಕಸ, ಡೆಬ್ರಿಸ್ ಹಾಕಿದರೆ ದಂಡ ವಿಧಿಸಲಾಗುವುದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಯಾರು ಕಸ, ಡೆಬ್ರಿಸ್ ತಂದು ಹಾಕುತ್ತಾರೆ ಅವರ ಪತ್ತೆಗೆ ಸಿಸಿ ಕ್ಯಾಮರಾ ಹಾಕಲಾಗುವುದು ಎಂದು ನಿರ್ಧರಿಸಲಾಗಿತ್ತು. ಕೆಲ ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕಸ, ಡೆಬ್ರಿಸ್ ತಂದು ಹಾಕುವ ವಾಹನಗಳಿಗೆ ದಂಡ ವಿಧಿಸುವ ಕೆಲಸ ಅಗಿತ್ತು. ಆದರೆ ಅಧಿಕಾರಿಗಳು ಬದಲಾದಂತೆ ಕಸ, ಡೆಬ್ರಿಸ್ ಸುರಿಯುವವರಿಗೆ ಕಡಿವಾಣ ಹಾಕುವುದು ನಿಂತು ಹೋಗಿದೆ. ಹೀಗಾಗಿ ಮತ್ತೆ ಹಿಂದಿನಂತೆ ನಗರದ ರಿಂಗ್ ರಸ್ತೆ ಸುತ್ತಲೂ ಕಸ, ಡೆಬ್ರಿಸ್ ಹಾಕುವ ಚಾಳಿ ಮತ್ತೆ ತಲೆ ಎತ್ತಿದೆ. ಇದರಿಂದ ನಗರದ ಸುತ್ತ ಕೊಂಪೆ ನಿರ್ಮಾಣಗೊಳ್ಳುತ್ತಿದೆ.
ಇನ್ನೇನು ನಾಡಹಬ್ಬ ದಸರಾ ಮಹೋತ್ಸವ ನಡೆಯಲಿದ್ದು, ದೇಶ, ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದಾರೆ. ಮೊದಲ ಹಂತದ ಆನೆಗಳು ಆರಮನೆಗೆ ಆಗಮಿಸಿ ತಾಲೀಮು ಆರಂಭಿಸಿವೆ. ಇಂತಹ ಸಮಯದಲ್ಲಾದರೂ ನಗರದಲ್ಲಿ ಹಾಕಿರುವ ಕಸ, ಡೆಬ್ರಿಸ್ ಅನ್ನು ತೆರವುಗೊಳಿಸುವ ಅಗತ್ಯವಿದೆ.
ನಗರದಲ್ಲಿ ಡೆಬ್ರಿಸ್ ವಿಲೇವಾರಿಗೆ ಸೂಕ್ತ ಸ್ಥಳವನ್ನು ಪಾಲಿಕೆ ನಿಗದಿ ಮಾಡದೆ ಇದ್ದ ಪರಿಣಾಮ ಸಾರ್ವಜನಿಕರು, ನಗರದ ಹೊರ ವಲಯದ ರಿಂಗ್ ರಸ್ತೆಗಳಲ್ಲಿ ಟಿಪ್ಪರ್, ಲಾರಿ, ಟ್ರ್ಯಾಕ್ಟರ್‌ಗಳಲ್ಲಿತಂದು ಹಾಕಿ ತೆರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ನಗರ ಹೊರ ವಲಯದ ಹಂಚ್ಯಾ-ಸಾತಗಳ್ಳಿ ಎ ವಲಯದಲ್ಲಿನ 9 ಎಕರೆ ಪ್ರದೇಶವನ್ನು ಡೆಬ್ರಿಸ್, ಕಸ ಹಾಕಲು ಗುರುತಿಸಲಾಗಿದೆ. ಈ ಸ್ಥಳದಲ್ಲಿಯೇ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಪಾಲಿಕೆ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಆದರೆ ಕೆಲ ದಿನಗಳು ಮಾತ್ರ ಅಲ್ಲಿಗೆ ತೆಗೆದುಕೊಂಡು ಹೋಗಿ ಹಾಕುತ್ತಿದ್ದ ಜನರು, ಈಗ ರಿಂಗ್ ರಸ್ತೆ ಅಕ್ಕ, ಪಕ್ಕ, ಖಾಲಿ ಜಾಗದಲ್ಲಿಯೇ ಸುರಿದು ಹೋಗುತ್ತಿದ್ದಾರೆ.

ಅಪಾರ ಪ್ರಮಾಣದ ಕಸ:
ರಿಂಗ್ ರಸ್ತೆಯಲ್ಲಿರುವ ನಾರಾಯಣ ಹೃದಯಾಲಯದ ಬಳಿ ರಾಯನಕೆರೆ ಹಾಗೂ ಕಾಮನಕೆರೆಹುಂಡಿ ಬಳಿ ಕರ್ನಾಟಕ ಗೃಹಮಂಡಳಿ ಹಾಗೂ ವಿವಿಧ ಖಾಸಗಿ ಬಡಾವಣೆಗಳ ಖಾಲಿ ನಿವೇಶನದಲ್ಲಿ ರಾಶಿ, ರಾಶಿ ಕಸ ಸುರಿಯಲಾಗಿದೆ. ವರುಣಾ ನಾಲೆಯ ದಡದಲ್ಲಿಯೂ ಅಪಾರ ಪ್ರಮಾಣದ ಕಸ ಸುರಿಯಲಾಗಿದೆ. ಗ್ಯಾರೇಜ್‌ಗಳಲ್ಲಿ ಉತ್ಪತ್ತಿಯಾಗುವ ಕಸ, ಹಣ್ಣಿನ ಮಂಡಿಗಳಲ್ಲಿ ಕೊಳೆತು ನಾರುವ ಹಣ್ಣು, ತರಕಾರಿ, ಪ್ಲಾಸ್ಟಿಕ್ ತ್ಯಾಜ್ಯಗಳು, ಕಾಪರ್ ವೈರ್‌ಗಳು, ವಾಹನಗಳಿಗೆ ಬಳಸುವ ಫೈಬರ್ ಪೀಸುಗಳ ರಾಶಿ, ವೈರ್‌ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ತಂದು ಸುರಿಯಲಾಗಿದೆ.

ಮಾಂಸದ ತ್ಯಾಜ್ಯ :
ಇದರೊಂದಿಗೆ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಚೀಲದಲ್ಲಿ ಕಟ್ಟಿಕೊಂಡು ತಂದು ಎಸೆಯಲಾಗುತ್ತಿದೆ. ಇದರಿಂದ ಮಾಂಸದ ತ್ಯಾಜ್ಯ ತಿನ್ನುವುದಕ್ಕಾಗಿ ನಾಯಿಗಳು ಆ ಸ್ಥಳದಲ್ಲಿಯೇ ಬೀಡು ಬಿಟ್ಟಿವೆ. ಅಲ್ಲದೆ ಸುರಿದಿರುವ ಒಣ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಪರಿಸರವನ್ನು ಹಾಳು ಮಾಡಲಾಗುತ್ತಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ರಸ್ತೆಯ ಎರಡು ಬದಿಯಲ್ಲಿ ಕಸದ ರಾಶಿ ಸುರಿಯಲಾಗುತ್ತಿದೆ. ಸಿವೇಜ್ ಫಾರಂಗೆ ಬೇರೆಡೆಯಿಂದ ತಂದು ಸುರಿಯುತ್ತಿದ್ದ ಕಸಕ್ಕೆ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ ಲಾರಿ, ಟೆಂಪೋಗಳಲ್ಲಿ ತಂದು ಕಸವನ್ನು ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಿದ್ದಾರೆ.

ಖಾಲಿ ನಿವೇಶನಗಳಲ್ಲಿ ಕಸ :
ಒಂದೆಡೆ ಪ್ಲಾಸ್ಟಿಕ್ ಹಾಗೂ ಒಣ ಮತ್ತು ಹಸಿ ಕಸದ ಹಾವಳಿ ಹೆಚ್ಚಾಗಿ ಮೈಸೂರಿನ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತಿದ್ದರು. ಮತ್ತೊಂದೆಡೆ ಕಟ್ಟಡಗಳ ತ್ಯಾಜ್ಯವನ್ನು ರಿಂಗ್ ರಸ್ತೆಯ ಬದಿಯಲ್ಲಿ ಖಾಲಿಯಿರುವ ನಿವೇಶನಗಳಲ್ಲಿ ಸುರಿದು ಪರಾರಿಯಾಗುತ್ತಿದ್ದಾರೆ. ವಿವಿಧೆಡೆಯಿಂದ ಮೈಸೂರು ನಗರಕ್ಕೆ ಹಾಗೂ ನಗರದ ಮೂಲಕ ಕೇರಳ, ತಮಿಳುನಾಡು ಸೇರಿದಂತೆ ವಿವಿಧೆಡೆಗೆ ಪ್ರಯಾಣಿಸುವ ಪ್ರಯಾಣಿಕರು ರಿಂಗ್‌ರಸ್ತೆಯ ಬದಿಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯಗಳನ್ನು ಕಂಡು ಮೂಗು ಮುರಿಯುತ್ತಿದ್ದಾರೆ.

ಮೃಗಾಲಯ ಪ್ರಾಣಿಗಳ ಮೇಲೆ ಪರಿಣಾಮ:

ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆಯ ನಡುವೆ ಇರುವ ರಸ್ತೆ ಯಾವಾಗಲೂ ತಂಪಾದ ವಾತಾವರಣ ಪ್ರವಾಸಿಗರು ಹಾಗೂ ವಾಯುವಿಹಾರಿಗಳಿಗೆ ಮುದ ನೀಡುತ್ತಿದೆ. ಒಂದು ಬದಿಯಲ್ಲಿ ಕಾರಂಜಿಕೆರೆ ಹಾಗೂ ಮತ್ತೊಂದು ಬದಿಯಲ್ಲಿ ಮೃಗಾಲಯದಲ್ಲಿರುವ ವಿವಿಧ ಪ್ರಾಣಿಗಳು ಕಾಣುವ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಆಹ್ಲಾದಕರ ಅನುಭವವಾಗಿದೆ. ಈ ನಡುವೆ ಇದೀಗ ಈ ರಸ್ತೆಯನ್ನು ಕಿಡಿಗೇಡಿಗಳು ಕಸ ಸುರಿಯುವ ಮೂಲಕ ವಾತಾವರಣ ಹದಗೆಡಿಸುವುದರೊಂದಿಗೆ ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ. ಥಂಡಿ ಸಡಕ್ ರಸ್ತೆಯಲ್ಲಿ ಸೋಫ, ಹಾಸಿಗೆ, ಕುಷನ್ ಸೀಟ್ ರಿಪೇರಿ ಮಾಡಿದ ನಂತರ ಉತ್ಪತ್ತಿಯಾಗುವ ಕಸ, ಹತ್ತಿಯ ಕಸ, ಪ್ಲಾಸ್ಟಿಕ್ ಕಸ ಸೇರಿದಂತೆ ಇನ್ನಿತರ ಕಸವನ್ನು ತಂದು ಈ ರಸ್ತೆಯ ಬದಿಯಲ್ಲಿ ಸುರಿದು ಪರಾರಿಯಾಗುತ್ತಿದ್ದಾರೆ. ಮುಂಜಾನೆ ಹಾಗೂ ರಾತ್ರಿ ವೇಳೆ ಈ ಕೃತ್ಯ ಎಸಗುತ್ತಿದ್ದು, ರಸ್ತೆಯ ಅಂದವನ್ನು ಕೆಡಿಸುತ್ತಿದ್ದಾರೆ.

ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು
ನಗರ ಪ್ರವಾಸಿತಾಣವಾಗಿದ್ದು, ಸ್ವಚ್ಛವಾಗಿ ಇಟ್ಟುಕೊಳ್ಳುವುದ ಎಲ್ಲರ ಜವಾಬ್ದಾರಿ. ಸಾರ್ವಜನಿಕರು ನಗರಪಾಲಿಕೆಯೊಂದಿಗೆ ಸಹಕಾರಿಸಬೇಕು. ಎಲ್ಲೆಂದರಲ್ಲಿ ಕಸ ಸುರಿಯದೆ ನಿಗಧಿ ಪಡಿಸಿದ ಜಾಗದಲ್ಲಿ ಸುರಿಯಬೇಕು. ಕಾರ್ಯಾಚರಣೆ ನಡೆಸಿ ಕಸ, ಡಬ್ರಿಸ್ ಸುರಿಯುವವರಿಗೆ ದಂಡ ವಿಧಿಸಲಾಗುವುದು.
ಅಶಾದ್ ಉರ್ ರೆಹಮಾನ್ ಷರೀಫ್
ಆಯುಕ್ತರು, ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net