

ವಿಜಯವಾಣಿ ಸುದ್ದಿಜಾಲ ಉಡುಪಿ
ದೇವರು, ಧರ್ಮ, ಪಾಲಕರು ಹಾಗೂ ಸಮಾಜದ ಋಣ ತೀರಿಸುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬಹುದು. ಸಂಪತ್ತನ್ನೂ ಗಳಿಸಬಹುದು. ಫಲಾಪೇಕ್ಷೆಯಿಲ್ಲದೆ ಶ್ರಮಿಸಿದರೆ ಯಶಸ್ಸು ಖಚಿತ. ಯಶಸ್ವಿ, ಸುರಕ್ಷಿತ ಹೂಡಿಕೆದಾರರಾಗಲು ಶೇರು ಮಾರುಕಟ್ಟೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಮುಂಬಯಿಯ ಬಿಎಸ್ಇ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸುಂದರರಾಮನ್ ರಾಮಮೂರ್ತಿ ಸಲಹೆ ನೀಡಿದರು.
ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಪಿಐಎಂ)ನಲ್ಲಿ ಜೂನ್ 5ರಂದು ಆಯೋಜಿಸಿದ್ದ ಭಾರತದ ಪ್ರತಿಷ್ಠಿತ ಹಾಗೂ ಏಷ್ಯಾದ ಅತ್ಯಂತ ಹಳೆಯ ಸ್ಟಾಕ್ ಎಕ್ಸ್ಚೇಂಜ್ನ ಉನ್ನತ ಅಧಿಕಾರಿಗಳು ಎಂಬಿಎ, ಎಂಸಿಎ ವಿದ್ಯಾರ್ಥಿಗಳು ಹಾಗೂ ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನ ಎಂಕಾಂ ವಿದ್ಯಾರ್ಥಿಗಳೊಂದಿಗೆ ಜೀವನದಲ್ಲಿ ಪ್ರೇರಣೆ ಹಾಗೂ ಪ್ರಚೋದನೆ ಎಂಬ ಸಂವಾದದಲ್ಲಿ ಮಾತನಾಡಿದರು.
ಬಿಎಸ್ಇ ಲಿಮಿಟೆಡ್ನ ಹಣಕಾಸು ಮುಖ್ಯಾಧಿಕಾರಿ ದೀಪಕ ಗೋಯಲ್ ಮಾತನಾಡಿ, ನಿರಂತರ ಹಾಗೂ ಸತತವಾಗಿ ಕಲಿಯುವಿಕೆಯಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಸಾಧ್ಯ. ಶೇರು ಮಾರುಕಟ್ಟೆಯಲ್ಲಿ ಅತಿ ದೀರ್ಘಾವಧಿಯ ಹೂಡಿಕೆಯಿಂದ ಲಾಭ ಗಳಿಸಬಹುದು ಎಂದರು.
ಉಡುಪಿಯ ಅದಮಾರು ಮಠದ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಈಶಪ್ರಿಯ ತೀರ್ಥ ಶ್ರೀಪಾದರು ಮಾರ್ಗದರ್ಶನ, ಆಶೀರ್ವಚನ ನೀಡಿದರು.
ಯುಎಸ್ಎಎಂಇಸಿ ಬೆಂಗಳೂರಿನ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್, ಖಜಾಂಚಿ ಸಿಎ ಜಿ.ವಿ. ಕೃಷ್ಣ, ಪಿಐಎಂನ ಆಡಳಿತ ಮಂಡಳಿಯ ಖಜಾಂಚಿ ಸಿಎ ಟಿ. ಪ್ರಶಾಂತ ಹೊಳ್ಳ, ಯುಎಸ್ಎಎಂಇಸಿ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಗೋಪಾಲ ಶಬರಾಯ, ಪೂರ್ಣಪ್ರಜ್ಞ ಕಾಲೇಜು ಹಾಗೂ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಚಾರ್ಯರು, ಪಿಐಎಂನ ಎಂಬಿಎ ಹಾಗೂ ಎಂಸಿಎ ವಿಭಾಗದ ಅಧ್ಯಾಪಕರು, ಎಂಕಾಂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಪಿಐಎಂನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಪ್ರಥಮ ಎಂಬಿಎ ವಿದ್ಯಾರ್ಥಿನಿಯರಾದ ಶಾರದಾ ಮತ್ತು ಆಶಿಕಾ ಪ್ರಾರ್ಥಿಸಿದರು. ಪಿಐಎಂನ ನಿರ್ದೇಶಕ ಡಾ. ಪಿ.ಎಸ್. ಐತಾಳ ಸ್ವಾಗತಿಸಿದರು. ಮಾಜಿ ನಿರ್ದೇಶಕ ಡಾ. ಭರತ ವಿ. ವಂದಿಸಿದರು. ಎಂಬಿಎ ವಿಭಾಗದ ಶೈಕ್ಷಣಿಕ ಸಂಯೋಜಕಿ ಡಾ. ಭಾರತಿ ಕಾರಂತ ಕಾರ್ಯಕ್ರಮ ನಿರೂಪಿಸಿದರು.