ತಪ್ಪು-ಒಪ್ಪುಗಳ ಕುರಿತು ಚರ್ಚೆ ಅಗತ್ಯ: ಪ್ರಕಾಶ್‌ರಾಜ್

8bdvt1
ಭದ್ರಾವತಿಯಲ್ಲಿ ಏರ್ಪಡಿಸಿದ್ದ ಸಂವಾದಲ್ಲಿ ಬಹುಭಾಷಾ ನಟ ಪ್ರಕಾಶ್‌ರಾಜ್ ಮಾತನಾಡಿದರು. ಕೆ.ಎಲ್.ಅಶೋಕ್, ಬಿ.ಕೆ.ಮೋಹನ್, ಪ್ರೊ. ಚಂದ್ರಶೇಖರಯ್ಯ, ಬಾಲಕೃಷ್ಣ ಇತರರಿದ್ದರು.
Published on

ಭದ್ರಾವತಿ: ನಾವಿರುವ ಸಮಾಜದಲ್ಲಿ ತಪ್ಪು-ಒಪ್ಪುಗಳ ಬಗ್ಗೆ ಚರ್ಚಿಸುವ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕೇ ಹೊರತು ಎಲ್ಲವನ್ನೂ ಒಪ್ಪಿಕೊಳ್ಳಬಾರದು. ತಪ್ಪು ಮಾಡಿದವರನ್ನು ಬೇಕಾದರೆ ಕ್ಷಮಿಸಬಹುದು, ಆದರೆ ಸುಮ್ಮನಿದ್ದವರನ್ನು ಮಾತ್ರ ಸಮಾಜ ಕ್ಷಮಿಸುವುದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್‌ರಾಜ್ ಹೇಳಿದರು.

ನ್ಯೂಟೌನ್ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ‘ರಂಗಭೂಮಿ, ಸಿನಿಮಾ ಹಾಗೂ ಸಮಾಜ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕಲೆ, ನಾಟಕ, ರಂಗಭೂಮಿ ಇಡೀ ಸಮಾಜಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾಗ ಕಲಾವಿದ ಕೂಡ ಸ್ಪಂದಿಸಬೇಕು ಎಂದರು.
ಎಲ್ಲ ಕಾಲಘಟ್ಟಗಳಲ್ಲಿಯೂ ಕೋಮು ಗಲಭೆಗಳು ನಡೆಯುತ್ತಲೇ ಬರುತ್ತಿವೆ. ಆದರೆ ಮಾಡಿದವರು ಒಬ್ಬರಾದರೆ ಪರಿಣಾಮ ನಮ್ಮ ಸಮಾಜ, ನಮ್ಮ ತಾಯಂದಿರು ಹಾಗೂ ನಮ್ಮ ನಿಮ್ಮ ಮಕ್ಕಳ ಮೇಲಾಗುತ್ತಿದೆ. ಇಲ್ಲಿ ನಾವೆಲ್ಲರೂ ಒಂದಾಗಬೇಕಿದೆ. ಸಾರ್ವಜನಿಕವಾಗಿ ಹಾಕಿರುವ ಫ್ಲೆಕ್ಸ್ ಹರಿಯುವ ಮೂಲಕ ಭಯದ ವಾತಾವರಣ ಸೃಷ್ಟಿಸುವ ಬದಲಾಗಿ, ಎಲ್ಲರೊಂದಿಗೆ ಬಾಂಧವ್ಯ ಬೆಸೆಯುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಂದಿನ ಅರಸರು ತಮ್ಮ ರಕ್ಷಣೆಗಾಗಿ ಮಾಡುತ್ತಿದ್ದ ಯುದ್ಧಗಳಿಗೆ ಅವರ ಸೈನ್ಯದಲ್ಲಿ ಕಳ್ಳರು, ದರೋಡೆಕೋರರನ್ನು ಸೇರಿಸಿಕೊಳ್ಳುತ್ತಿದ್ದರು. ಯುದ್ಧದ ನಂತರ ಅವರಿಗೆ ಹಣ ನೀಡಲಾಗದೆ ಮತ್ತೆ ದರೋಡೆ, ಅತ್ಯಾಚಾರದಂತ ಹೇಯ ಕೃತ್ಯಗಳಿಗೆ ಕಳುಹಿಸುತ್ತಿದ್ದರು. ಇಂದಿನ ರಾಜಕಾರಣಿಗಳೂ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಂವಾದದಲ್ಲಿ ರಾಜಕೀಯ, ಸಿನಿಮಾ, ದೇಶ, ಮಣಿಪುರದ ಘಟನೆಗಳು ಕುರಿತಂತೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಾರ್ವಜನಿಕರು, ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಎಂದಿದ್ದರೂ ಹೆಚ್ಚು ಚರ್ಚೆ ನಡೆದದ್ದು ಮಾತ್ರ ಸಾರ್ವಜನಿಕರೊಂದಿಗೆ ಎಂಬುದು ವಿಶೇಷ.
ನಗರಸಭೆ ಸದಸ್ಯ ಬಿ.ಕೆ.ಮೋಹನ್, ನಿವೃತ್ತ ಪ್ರೊ. ಚಂದ್ರಶೇಖರಯ್ಯ, ಬಾಲಕೃಷ್ಣ, ಚಿನ್ನಯ್ಯ, ಭದ್ರಾವತಿ ಸತ್ಯ, ಜಿ.ರಾಜು, ಸುರೇಶ್ ಚನ್ನಪ್ಪ ಇತರರಿದ್ದರು.

ಮಾತಿನ ಚಕಮಕಿ
ಪೊಲೀಸರು ಯೂನಿಫಾರ್ಮ್ ಧರಿಸಿ, ಗುರುತಿನ ಚೀಟಿ ಹೊಂದಿದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜು ಒಳಾಂಗಣ ಪ್ರವೇಶಿಸಲು ಅವಕಾಶ ನೀಡಿದರು. ಇದರಿಂದ ಕೆಲ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ, ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಪ್ರಕಾಶ್‌ರಾಜ್ ಆಗಮಿಸುವ ಹಿನ್ನೆಲೆಯಲ್ಲಿ ನಗರದ ನ್ಯೂಟೌನ್ ಸರ್ ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎಎಸ್‌ಪಿ ಜಿತೇಂದ್ರಕುಮಾರ್ ದಯಾಮ, ವೃತ್ತ ನಿರೀಕ್ಷಕರು, ಎಲ್ಲ ಠಾಣೆಗಳ ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿ 200ಕ್ಕೂ ಅಧಿಕ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net