

ಮೈಸೂರು: ರಾಷ್ಟ್ರಪತಿ ಭೇಟಿ ಸಲುವಾಗಿ ಕಾಂಗ್ರೆಸ್ ಶಾಸಕರ ದೆಹಲಿ ಪರೇಡ್ ಕುರಿತು ಚರ್ಚೆ ನಡೆದಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಅರಮನೆಯಲ್ಲಿ ಶುಕ್ರವಾರ ಗಜಪಡೆಯ ಸ್ವಾಗತ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಕಾಂಗ್ರೆಸ್ ಶಾಸಕರೆಲ್ಲ ತೆರಳಿ ರಾಷ್ಟ್ರಪತಿ ಮುಂದೆ ಪರೇಡ್ ನಡೆಸುವ ಕುರಿತು ಚರ್ಚೆ ನಡೆದಿದೆ. ಯಾವತ್ತು? ಏನು? ಎಂಬುದು ಇನ್ನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.
ಬಿಜೆಪಿ ರಾಜಭವನವನ್ನು ಪಕ್ಷದ ಕಚೇರಿಯಾಗಿ ಬಳಸುತ್ತಿದೆ. ರಾಜ್ಯಪಾಲರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವುದು ಅನಿವಾರ್ಯ. ಆದ್ದರಿಂದ ನಮ್ಮ ರಕ್ಷಣೆಗೆ ರಾಷ್ಟ್ರಪತಿ ಬರಬೇಕಿದೆ. ಈಗ ನಮಗೆ ರಾಷ್ಟ್ರಪತಿ ಬಳಿಗೆ ಹೋಗಬೇಕಾದ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಬದಲಿ ನಿವೇಶನಕ್ಕಾಗಿ ಸಿಎಂ ಪತ್ನಿ ಮುಡಾಕ್ಕೆ ಕೊಟ್ಟಿರುವ ಪತ್ರದಲ್ಲಿ ವೈಟ್ನರ್ ಹಾಕಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪತ್ರದಲ್ಲಿ ಹೇಳಬೇಕಾಗಿರುವುದನ್ನು ಸರಿಯಾಗಿ ಹೇಳಿದ್ದಾರೆ. ಅದರಲ್ಲಿ ಯಾವ ತಪ್ಪು ಇಲ್ಲ. ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೇಳಿದ್ದಾರೆಯೇ ಹೊರತು, ಇಂತಹದ್ದೇ ನಿವೇಶನ ಕೊಡಿ ಎಂದು ಕೋರಿಲ್ಲ. ಬರೆಯುವಾಗ ಏನೋ ತಪ್ಪಾಗಿದೆ, ಅದಕ್ಕಾಗಿ ವೈಟ್ನರ್ ಹಾಕಿರಬಹುದು. ತನಿಖೆಯಲ್ಲಿ ಗೊತ್ತಾಗುತ್ತದೆ. ಯಾರು ವೈಟ್ನರ್ ಹಾಕಿದ್ದು ಎಂಬುದೂ ತಿಳಿಯುತ್ತದೆ ಎಂದು ಹೇಳಿದರು.
ನಾನು ಶಾಸಕನಾಗಿ ಮುಡಾದ ಎಲ್ಲ ಸಭೆಯಲ್ಲಿ ಭಾಗಿಯಾಗಿದ್ದು, ಸಿಎಂ ಪತ್ನಿಗೆ ನಿವೇಶನ ಕೊಟ್ಟಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಒಂದೊಂದು ರೀತಿಯ ವಿಶ್ಲೇಷಣೆ ಸರಿಯಲ್ಲ ಎಂದು ಹೇಳಿದರು.