ಹೈವೇ ದ್ವಾರ ಬಂದ್‌ಗೆ ಶಾಸಕ ಅತೃಪ್ತಿ: ಬೆಂ-ಮೈ ಹೆದ್ದಾರಿ ಕುರಿತು ಸದನದಲ್ಲಿ ಚರ್ಚೆ

Mla Ravikumar Ganiga
Published on

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಕೆಲ ದಿನದ ಹಿಂದೆ ಆಗಮನ ಮತ್ತು ನಿರ್ಗಮನ ದ್ವಾರವನ್ನು ಮುಚ್ಚಿರುವ ಹಾಗೂ ಸೇವಾ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರುವ ಕುರಿತು ಶಾಸಕ ರವಿಕುಮಾರ್ ಗಣಿಗ ಚರ್ಚೆ ನಡೆಸಿದ್ದಾರೆ.

ಬೆಂ-ಮೈ ಹೆದ್ದಾರಿಯಲ್ಲಿ ಸಾರ್ವಜನಿಕರಿಗಾಗುತ್ತಿರುವ ತೊಂದರೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಶಾಸಕರು, ಸ್ಥಳೀಯರು ಸಂಚಾರ ಮಾಡಲು ಅನುಕೂಲವಾಗುವಂತೆ ತೆರೆದಿದ್ದ ಆಗಮನ ಮತ್ತು ನಿರ್ಗಮನ ದ್ವಾರವನ್ನು ಇದ್ದಕ್ಕಿದ್ದಂತೆ ಮುಚ್ಚಲಾಗಿದೆ. ಪರಿಣಾಮ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಇದಲ್ಲದೆ ಸರ್ವೀಸ್ ರಸ್ತೆಗೆ ಸಂಬಂಧಿಸಿದಂತೆ ಹಲವೆಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಕೂಡ ಜನರಿಗೆ ಸಮಸ್ಯೆಯಾಗುವಂತೆ ಮಾಡಿದೆ ಎಂದು ಅತೃಪ್ತಿ ಹೊರಹಾಕಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಬೆಂ-ಮೈ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯವ್ಯಾಪ್ತಿಗೆ ಒಳಪಡುತ್ತದೆ. ಶಾಸಕ ರವಿಕುಮಾರ್ ಗಣಿಗ ಅವರು ಹೇಳಿರುವ ಸಮಸ್ಯೆಗೆ ಪ್ರಾಧಿಕಾರದಿಂದ ಉತ್ತರ ಬಂದಿದೆ. ಅದರಂತೆ ಹೆದ್ದಾರಿಯಲ್ಲಿ ಸಂಚಾರ ಮಾಡುವ ಭಾರೀ ವಾಹನ, ಟೋಲ್ ಪ್ಲಾಜಾಗಳನ್ನು ಬೈಪಾಸ್ ಮಾಡುವ ಉದ್ದೇಶದಿಂದ ಸರ್ವೀಸ್ ರಸ್ತೆಯಲ್ಲಿ ನಿರ್ಗಮಿಸುತ್ತಿರುವುದರಿಂದ, ಸರ್ವೀಸ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಅಂತೆಯೇ ಸರ್ವೀಸ್ ರಸ್ತೆಯನ್ನು ಸ್ಥಳೀಯರು ಸಂಚಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಭಾರೀ ವಾಹನ ಸರ್ವೀಸ್ ರಸ್ತೆಯಲ್ಲಿ ಸಂಚರಿಸುತ್ತಿರುವ ಕಾರಣ, ರಸ್ತೆ ಸುರಕ್ಷತೆ ಸಮಸ್ಯೆಯಾಗುವುದರ ಜತೆಗೆ ಅಪಘಾತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ಭಾರೀ ವಾಹನ ತಡೆದು ನಿಲ್ಲಿಸುವ ಮೂಲಕ ಪ್ರತಿಭಟನೆ ಕೂಡ ನಡೆದಿವೆ. ಆದ್ದರಿಂದ ರಸ್ತೆ ಸುರಕ್ಷತೆಯ ಹಿತದೃಷ್ಟಿಯಿಂದ ಹೆದ್ದಾರಿಯಲ್ಲಿ ಪ್ರಯಾಣಿಸುವ ಭಾರಿ ವಾಹನ ಅಂದರೆ ಟ್ರಕ್ ಮಾತ್ರ ಸರ್ವೀಸ್ ರಸ್ತೆಯಲ್ಲಿ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ ಎಂದಿದ್ದಾರೆ.

ಆದರೆ ಕಾರು, ಜೀಪ್ ಸೇರಿದಂತೆ ಇತರೆ ವಾಹನಕ್ಕೆ ಪಕ್ಕದ ಹಳ್ಳಿ ತಲುಪಲು ಸರ್ವೀಸ್ ರಸ್ತೆಗೆ ಪ್ರವೇಶಿಸಲು ಅನುಮತಿ ಇದೆ. ಆದ್ದರಿಂದ ಸರ್ವೀಸ್ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಮಾತ್ರವಲ್ಲದೆ ಸರ್ವೀಸ್ ರಸ್ತೆಯ ನಿರ್ಮಾಣವನ್ನು ಯೋಜನೆಯ ಕರಾರಿನಲ್ಲಿರುವಂತೆ ಪೂರ್ಣಗೊಳಿಸಿರುವುದಾಗಿ ಪ್ರಾಧಿಕಾರ ಮಾಹಿತಿ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net