

ಯಾದಗಿರಿ: ಇಲ್ಲೊಂದು ಕಡೆ ನಡೆದ ಸೀಮಂತ ಸಮಾರಂಭದಲ್ಲಿ ಸಂಭವಿಸಿದ ದುರಂತ 15 ಜನರನ್ನು ಈಗ ಜೀವಂತ ಇರದಂತೆ ಮಾಡಿದ್ದರೆ, ಇನ್ನುಳಿದ 9 ಮಂದಿಯಲ್ಲೂ ಭಾರಿ ಆತಂಕ ಮೂಡಿಸಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಫೆ. 25ರಂದು ನಡೆದಿದ್ದ ಸೀಮಂತ ಸಮಾರಂಭದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಸತ್ತವರ ಸಂಖ್ಯೆ ಇಂದು 15ಕ್ಕೆ ಏರಿದೆ.
ಅಂದು ನಡೆದ ಸೀಮಂತ ಸಮಾರಂಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 24 ಮಂದಿ ಗಾಯಗೊಂಡಿದ್ದು, 8 ಜನರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅದೇ ದಿನ ನಾಲ್ವರು ಸಾವಿಗೀಡಾಗಿದ್ದು, ಬಳಿಕ ಒಬ್ಬೊಬ್ಬರೇ ಸಾವಿಗೀಡಾಗಿ ಸತ್ತವರ ಸಂಖ್ಯೆ ಮಾ. 3ರಂದು 9ಕ್ಕೆ ತಲುಪಿತ್ತು. ಉಳಿದ ಗಾಯಾಳುಗಳ ಚಿಕಿತ್ಸೆ ಮುಂದುವರಿದಿತ್ತು.
ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್ ಸೇರಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ನಿನ್ನೆ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗಣ್ಣ ಹಳ್ಳದ್ (47) ಕೂಡ ಸಾವಿಗೀಡಾಗಿದ್ದು, ಅಲ್ಲಿಗೆ ಈ ಪ್ರಕರಣದಲ್ಲಿ ಸತ್ತವರ ಸಂಖ್ಯೆ 14ಕ್ಕೆ ತಲುಪಿತ್ತು.
ಇನ್ನುಳಿದ ಹತ್ತು ಮಂದಿಗೆ ಕಲಬುರಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಇಂದು ಮತ್ತೊಬ್ಬರು ಸಾವಿಗೀಡಾಗಿದ್ದಾರೆ. ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಶೇಖರ್ ಮಲಗೊಂಡ (45) ಇಂದು ಸಾವಿಗೀಡಾಗಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಸತ್ತವರ ಸಂಖ್ಯೆ 15ಕ್ಕೆ ಏರಿದೆ. ಇನ್ನುಳಿದ 9 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಕುಟುಂಬಸ್ಥರು ಸರಣಿ ಸಾವಿನಿಂದ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಚಿಕಿತ್ಸೆಯಲ್ಲಿರುವ ಆ 9 ಮಂದಿಯಲ್ಲೂ ಭಾರಿ ಆತಂಕ ಉಂಟಾಗಿದೆ.