ಪತ್ನಿ ಕೊಲೆ ಮಾಡಿದ್ದ ಪತಿಗೆ ಮರಣ ದಂಡನೆ

Crime Logo
Published on

ಮೈಸೂರು: ಜೂಟಾಟದ ಚಟಕ್ಕೆ ಬಿದ್ದು ಹಣ ತರುವಂತೆ ಪತ್ನಿಗೆ ಕಿರುಕುಳ ನೀಡಿ ಹಾಡ ಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಪತಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಚಾಮರಾಜನಗರ ಜಿಲ್ಲೆ ನವಿಲೂರು ಗ್ರಾಮದ ಮಹೇಶ (35) ಶಿಕ್ಷೆಗೆ ಗುರಿಯಾದವ. ಮೈಸೂರು ತಾಲೂಕು ಯಾಂದಹಳ್ಳಿಯ ಶಿಲ್ಪಾ (30)ಳನ್ನು ಒಂದೂವರೆ ವರ್ಷದ ಹಿಂದೆ ಕೊಲೆ ಮಾಡಿದ್ದ. ಶಿಲ್ಪಾಳನ್ನು ಮದುವೆಯಾಗಿದ್ದ ಮಹೇಶನಿಗೆ ಇಬ್ಬರು ಮಕ್ಕಳಿದ್ದರು. ಯಾವುದೇ ಕೆಲಸ ಇಲ್ಲದೆ ಜೂಟಾಟದ ಚಟಕ್ಕೆ ಬಿದ್ದಿದ್ದ. ಕುಟುಂಬ ನಿಭಾಯಿಸದೆ ಪತ್ನಿ ಮೇಲೆ ಅವಲಂಬಿತನಾಗಿದ್ದ. ಅಲ್ಲದೆ, ಜಮೀನು ಮಾರಾಟ ಮಾಡಲು ಮುಂದಾದಾಗ ಪತ್ನಿ ಶಿಲ್ಪಾ ಒಪ್ಪಿಗೆ ಸೂಚಿಸಿರಲಿಲ್ಲ. ಇದರಿಂದ ಜಗಳ ನಡೆದು ಆಕೆ ಯಾಂದಹಳ್ಳಿಯ ತವರು ಮನೆ ಸೇರಿದ್ದಳು.

ಹಿರಿಯರು ನ್ಯಾಯ ಪಂಚಾಯಿತಿ ಮಾಡಿದ ಬಳಿಕ ಮಹೇಶ ಕೂಡಾ ಅತ್ತೆಯ ಮನೆಯಲ್ಲೇ ಕೆಲ ದಿನ ಉಳಿದುಕೊಂಡಿದ್ದು, ಮತ್ತೆ ಹಣಕ್ಕೆ ಪೀಡಿಸುತ್ತಿದ್ದ. ಜಮೀನು ಮಾರಾಟ ಮಾಡಲು ಸಹಿ ಹಾಕುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಶಿಲ್ಪಾ ಸಹಿ ಹಾಕಲು ಒಪ್ಪದಿದ್ದಾಗ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದ ಆಕೆಯನ್ನು 2024ರ ಏಪ್ರಿಲ್ 14ರಂದು ಬಸ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ನಾಡಹಳ್ಳಿಯ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದ ಬಳಿ ಹಾಡ ಹಗಲೇ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದ. ಶಿಲ್ಪಾ ಮರು ದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಆಲನಹಳ್ಳಿ ಠಾಣೆ ಪೊಲೀಸರು, ನಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎನ್.ರೂಪಾ, ಸಾಕ್ಷಾೃಧಾರ ಪರಿಶೀಲಿಸಿ ಅಪರಾಧಿಗೆ ಮರಣ ದಂಡನೆ ಹಾಗೂ ಒಂದು ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಈ.ಯೋಗೇಶ್ವರ ಅವರು ಸರ್ಕಾರದ ಪರ ವಕಾಲತ್ತು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net