ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ? ಸಿಎಂ ಬೊಮ್ಮಾಯಿ ಘೋಷಣೆ

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published on

ಬೆಂಗಳೂರು: ಮೈಸೂರಿನ ಅತ್ಯಾಚಾರ ಪ್ರಕರಣದಲ್ಲಿ ಎಫ್​ಐಆರ್ ದಾಖಲಿಸುವಲ್ಲಿ ಪೊಲೀಸರು ತಡಮಾಡಿದರು. ಗೃಹ ಸಚಿವರು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಸರ್ಕಾರದ ಮೇಲೆ ಮುಗಿಬಿದ್ದ ಪ್ರಸಂಗ ಬುಧವಾರ ವಿಧಾನಸಭೆಯಲ್ಲಿ ನಡೆಯಿತು. ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದೇವೆ, ಎಲ್ಲೂ ಮೈಮರೆತಿಲ್ಲ. ಸಾಕ್ಷ್ಯವೇ ಇಲ್ಲದ ಕೇಸ್​ನಲ್ಲಿ ಘಟನೆ ನಡೆದ 80 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿರುವುದೇ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದಕ್ಕೆ ಸಾಕ್ಷಿ ಎಂದು ಸಮರ್ಥಿಸಿಕೊಂಡಿತು. ಜತೆಗೆ ತಪ್ಪಿತಸ್ಥರಿಗೆ ಮರಣದಂಡನೆಗೆ ಕ್ರಮವಹಿಸುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಿಸಿದ್ದು, ಪ್ರಾಸಿಕ್ಯೂಷನ್​ಗೆ ಹೆಚ್ಚಿನ ಗಮನ ನೀಡುವುದು, ವಿಶೇಷ ವಕೀಲರ ನೇಮಕ ಮಾಡಿಕೊಳ್ಳುವ ಪ್ರಸ್ತಾಪ ಮಾಡಿದರು.

ನಿಯಮ 69ರ ಮೇಲೆ ನಡೆದ ಚರ್ಚೆಯಲ್ಲಿ ಪೊಲೀಸರು ಎಡವಿದ್ದಾರೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್​ನ ಯತೀಂದ್ರ, ಜೆಡಿಎಸ್​ನ ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ ಮಾಡಿದರು. ಘಟನೆ ನಡೆದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ, ಆಸ್ಪತ್ರೆಯಿಂದ ಮೆಡಿಕೋ ಲೀಗಲ್ ಕೇಸ್ ಎಂಬ ಮಾಹಿತಿ ಬಂದ ನಂತರ ಎಫ್​ಐಆರ್ ದಾಖಲಿಸದೆ ದೂರುದಾರರಿಗಾಗಿ ಕಾಯ್ದಿದ್ದು ಸರಿಯಲ್ಲ ಎಂದರು. ಹಾಗೆಯೇ ಸರ್ಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದೆ ಎಂಬ ಅನುಮಾನ ಕೂಡ ಕಾಣಿಸಿತು ಎಂದರಲ್ಲದೆ, ಪೊಲೀಸರು ಲಘುವಾಗಿ ಪರಿಗಣಿಸಿದರು ಎಂದು ಹೇಳಿದರು.

ಗೃಹ ಸಚಿವರು ಮೈಸೂರಿಗೆ ಆಗಮಿಸಿದ ನಂತರ ಚಾಮುಂಡಿ ಬೆಟ್ಟಕ್ಕೆ ಭೇಟಿಕೊಟ್ಟರು, ಪೊಲೀಸ್ ಅಕಾಡೆಮಿಗೆ ಹೋಗಿ ಗನ್ ಹಿಡಿದು ಫೋಸ್ ಕೊಟ್ಟರು. ಆಬಳಿಕ ಘಟನೆ ನಡೆದ ಸ್ಥಳಕ್ಕೆ ಹೋದರು. ಇದನ್ನು ಗಮನಿಸಿದರೆ, ಪ್ರಕರಣವನ್ನು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಆರಗ ಜ್ಞಾನೇಂದ್ರ, ನಾನು ಅಲ್ಲಿಗೆ ಹೋಗಬೇಕೋ ಬೇಡವೋ ಎಂಬ ಜಿಜ್ಞಾಸೆ ಇದ್ದು, ವಕೀಲರೊಬ್ಬರು ಅಲ್ಲಿಗೆ ಹೋಗುವುದು ಸೂಕ್ತವಲ್ಲವೆಂದರು, ಮತ್ತೆ ಕೆಲವರು ಹೋಗದೆ ಇದ್ದರೆ ಬೇರೆ ಅರ್ಥಪಡೆದುಕೊಳ್ಳುತ್ತದೆ ಎಂದರು. ಅಂತಿಮವಾಗಿ ಭೇಟಿಕೊಟ್ಟೆ ಎಂದು ಹೇಳಿದರು.

ಪೊಲೀಸರ ಆತ್ಮಸ್ಥೈರ್ಯ ಕಾಪಾಡುವುದು ಮುಖ್ಯ. ತನಿಖೆ ಸರಿಯಾದ ದಿಕ್ಕು, ಸಕಾಲದಲ್ಲಿ ನಡೆಯಬೇಕು, ಆರೋಪಿಗಳಿಗೆ ಶಿಕ್ಷೆಯಾಗಬೇಕೆಂಬ ಅಭಿಪ್ರಾಯ ಇದೆ. ಮರಣದಂಡನೆ ಆಗುವಂತೆ ಮಾಡುವುದು ನಮ್ಮ ಆದ್ಯತೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಸಿದ್ದರಾಮಯ್ಯ ಪಂಚೆ ಪ್ರಸಂಗ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದ ವೇಳೆ ಸಿದ್ದರಾಮಯ್ಯ ಪಂಚೆ ಉದುರುತ್ತಿತ್ತು. ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸ್ಥಾನಕ್ಕೆ ಆಗಮಿಸಿ ಕಿವಿಯಲ್ಲಿ ಪಂಚೆ ಉದುರಿದ್ದರ ಬಗ್ಗೆ ಉಸುರಿದರು. ಆದರೆ, ಸಿದ್ದರಾಮಯ್ಯ ಸ್ವತಃ ‘ಪಂಚೆ ಬಿಚ್ಚಿದೆ ಕಟ್ಟಿಕೊಳ್ಳುತ್ತೇನೆ ಇರಿ’ ಎಂದು ಮೈಕಲ್ಲೇ ಹೇಳಿಬಿಟ್ಟರು. ಇದನ್ನು ಗಮನಿಸಿದ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಕುಮಾರ್ ಬಂಗಾರಪ್ಪ, ಜಿಂದಾಲ್​ಗೆ ಹೋಗಿಬಂದ ಮೇಲೆ ತೂಕ ಕಡಿಮೆ ಆಗಿರಬೇಕು ಎಂದರು. ಬಳಿಕ ಸಿದ್ದರಾಮಯ್ಯ ಕುರ್ಚಿಯಲ್ಲಿ ಕುಳಿತು ಪಂಚೆ ಕಟ್ಟಿಕೊಂಡರು. ಇದನ್ನು ಗಮನಿಸಿದ ಕೆ.ಎಸ್.ಈಶ್ವರಪ್ಪ, ಸಹಾಯಕ್ಕೆ ಬರಲೇ ಎಂದು ಕಿಚಾಯಿಸಿದರು. ನೀ ಬರೋದು ಬೇಡಪ್ಪ, ನಮ್ಮವರೇ ಇದ್ದಾರೆ ಎಂದಾಗ ಸದನದಲ್ಲಿ ನಗು ಉಕ್ಕಿತು. ಆಗ ರಮೇಶ್​ಕುಮಾರ್ ಎದ್ದುನಿಂತು, ನಮ್ಮ ಅಧ್ಯಕ್ಷರು ಮಾನ ಉಳಿಯಲಿ ಎಂದು ಗುಟ್ಟಾಗಿ ಹೇಳಿದರೆ, ನೀವು ಟಾಂ ಟಾಂ ಮಾಡಿದಿರಿ ಎಂದು ಸಿದ್ದರಾಮಯ್ಯ ಉದ್ದೇಶಿಸಿ ಹೇಳಿದರಲ್ಲದೆ, ಈಶ್ವರಪ್ಪ ಕಾದು ಕುಳಿತಿದ್ದಾರೆ ನೋಡಿ ಎಂದಾಗ. ನನ್ನ ಪಂಚೆ ಯಾರೂ ಬಿಚ್ಚಲು ಆಗಲ್ಲ. ಅದು ತನ್ನಷ್ಟಕ್ಕೆ ತಾನೇ ಬಿಚ್ಚಿಕೊಂಡಿದೆ. ಕರೊನಾ ಬಂದ ಮೇಲೆ 3-4 ಕೆಜಿ ತೂಕ ಕಡಿಮೆ ಆಯಿತು. ಆದರೆ ಹೊಟ್ಟೆ ಬಂದಿದೆ. ಪಂಚೆ ಕಳಚಿಹೋಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದಾಗ ಸದನ ಮತ್ತೆ ನಗೆಗಡಲಲ್ಲಿ ತೇಲಿತು.

ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲ್ಲ. ಅನೇಕ ಅಪವಾದಗಳಿವೆ. ಅದೆಲ್ಲವನ್ನೂ ಸರಿಮಾಡಿಕೊಳ್ಳಬೇಕು. ದುರುದ್ದೇಶದಿಂದ ಈ ಪ್ರಕರಣ ಮುಚ್ಚಿಹಾಕುವ ಕೆಲಸ ಮಾಡಿಲ್ಲ. | ಆರಗ ಜ್ಞಾನೇಂದ್ರ ಗೃಹ ಸಚಿವ

ಅಂಜಲಿ, ರೂಪಕಲಾ ಕಣ್ಣೀರು ಅತ್ಯಾಚಾರ ಪ್ರಕರಣದಲ್ಲಿ ಎಫ್​ಐಆರ್ ದಾಖಲಿ ಸಲು ಪೊಲೀಸರು ತಡ ಮಾಡಿದರು ಎಂದು ಪ್ರತಿಪಕ್ಷ ವಾಗ್ದಾಳಿ ನಡೆಸಿತು, ‘ನಿಮ್ಮ ಸರ್ಕಾರದವಿದ್ದಾಗ ಏನೇನಾಗಿದೆ, ಎಷ್ಟು ಪ್ರಕರಣ ನಡೆದಿದೆ’ ಎಂದು ಆಡಳಿತ ಪಕ್ಷ ವಾಗ್ವಾದಕ್ಕಿಳಿಯಿತು. ಈ ವೇಳೆ ರೂಪಕಲಾ ಶಶಿಧರ್, ಸೌಮ್ಯಾ ರೆಡ್ಡಿ, ಅಂಜಲಿ ನಿಂಬಾಳ್ಕರ್ ಸ್ಪೀಕರ್ ಪೀಠದ ಮುಂದೆ ಆಗಮಿಸಿ ಭಾವೋದ್ವೇಗಕ್ಕೊಳಗಾಗಿ ಧರಣಿಗೆ ಮುಂದಾದರು. ಸ್ಪೀಕರ್ ಅವರನ್ನೆಲ್ಲ ವಾಪಸ್ ಕಳಿಸಿದರು. ರೂಪಕಲಾ ಗದ್ಗದಿತರಾಗಿ ರೇಪ್ ಪದ ಬಳಸಬೇಡಿ ಎಂದು ಮನವಿ ಮಾಡಿದರು. ಯಾದಗಿರಿ ಘಟನೆಯಲ್ಲಿ ದುಷ್ಕರ್ವಿುಗಳು ವಿಡಿಯೋ ಮಾಡಿದ್ದು ಕೇಳಿ ರಕ್ತ ಕುದಿಯಿತು. ದುಷ್ಟರಿಗೆ ಚಪ್ಪಲಿ ತಗೊಂಡು ಹೊಡೀಬೇಕು ಅನಿಸಿತು ಎಂಬ ರೋಷಾವೇಶ ವ್ಯಕ್ತಪಡಿಸಿದರು. ಅಂಜಲಿ ನಿಂಬಾಳ್ಕರ್ ತಮ್ಮ ಆಸನಕ್ಕೆ ತೆರಳಿ ಕಣ್ಣೀರು ಹಾಕಲು ಆರಂಭಿಸಿದರು. ಅಲ್ಲಿಗೆ ಆಗಮಿಸಿದ ರಾಜೂಗೌಡ ಸಮಾಧಾನಪಡಿಸಲು ಪ್ರಯತ್ನಿಸಿದರು. ಮೊಗಸಾಲೆಗೆ ಆಗಮಿಸಿದಾಗಲೂ ಅಂಜಲಿ ಕಣ್ಣೀರು ಹಾಕಿದರು.

ಆರೋಪಿಗಳ ವಿರುದ್ಧ ಆಂಧ್ರ ಮಾದರಿ (ಎನ್​ಕೌಂಟರ್) ಕ್ರಮಕೈಗೊಳ್ಳುತ್ತೀರೆಂದು ಭಾವಿಸಿದ್ದೆ, ಆದರೆ ಕೈಗೊಳ್ಳಲಿಲ್ಲ. ಮುಂದೆ ಇಂತಹ ಒಂದೇ ಒಂದು ಪ್ರಕರಣವಾದರೆ ಆಂಧ್ರ ಮಾದರಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ನಾನು ಬಿಡಲ್ಲ. | ಸಾ.ರಾ.ಮಹೇಶ್ ಜೆಡಿಎಸ್ ಶಾಸಕ

ಸಿದ್ದು-ಸಿಎಂ ವಾಗ್ಯುದ್ಧ

ಚರ್ಚೆ ವೇಳೆ ಸಿದ್ದರಾಮಯ್ಯ ಇಂತಹ ಸರ್ಕಾರ ನೋಡಿಲ್ಲವೆಂದಾಗ ಸಿಎಂ ಬೊಮ್ಮಾಯಿ ಕುಪಿತರಾಗಿ ಯಾರು ಯಾವ ತರಹ ಅಧಿಕಾರ ನಡೆಸಿದ್ದಾರೆಂದು ಗೊತ್ತಿದೆ ಎಂದು ತಿರುಗೇಟು ಕೊಟ್ಟರೆ, ಆಗ ನೀವೇನ್ ಕಡ್ಲೆಪುರಿ ತಿಂತಿದ್ದೀರಾ ಎಂದು ಸಿದ್ದರಾಮಯ್ಯ ತಿವಿದರು. ಇದು, ಆಡಳಿತ ಮತ್ತು ಪಕ್ಷದ ಸದಸ್ಯರ ನಡುವೆ ವಾಗ್ವಾದ, ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಇದರ ಮಧ್ಯೆಯೇ ಎನ್​ಸಿಆರ್​ಬಿ ವರದಿ ಪ್ರಕಾರ, 2013-16ರ ಮಧ್ಯೆ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ ಎಂದು ಬೊಮ್ಮಾಯಿ ಪ್ರತ್ಯುತ್ತರಿಸಿದರು.

ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಪ್ರವೇಶ

ರಾಜ್ಯ ಪೊಲೀಸ್ ಇಲಾಖೆಯಲ್ಲೂ ರಾಜಕೀಯ ಪ್ರವೇಶಿಸಿದೆ. ಆಯಾ ಕ್ಷೇತ್ರದ ಶಾಸಕರು ಹೇಳಿದವರನ್ನೇ ಠಾಣೆಗಳಿಗೆ ಸಿಪಿಐ, ಪಿಎಸ್​ಐಗಳನ್ನು ನಿಯೋಜಿಸಲಾಗುತ್ತಿದೆ. ಈ ಬೆಳವಣಿಗೆಯಿಂದ ಸಮಾಜದ ಹಿತಕಾಯುವುದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ ಎಂದು ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ ಆತಂಕ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪೊಲೀಸರು ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ವಯ ಕ್ರಮವಹಿಸದಿರುವ ಬಗ್ಗೆ ನಿಯಮ 68ರಲ್ಲಿ ರ್ಚಚಿಸಿದರು. ಕೃತ್ಯ ನಡೆದ 15 ಗಂಟೆಗಳ ಬಳಿಕ ದೂರು ದಾಖಲಿಸಿಕೊಂಡಿರುವುದು ಹಾಗೂ ವೈದ್ಯಾಧಿಕಾರಿಗಳು ಹಲ್ಲೆ ನಡೆದಿದೆ ಎಂದು ವರದಿ ನೀಡಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ತನಿಖೆ ನಡೆಯಬೇಕು. ಗೃಹ ಸಚಿವರು ನೈತಿಕ ಹೊಣೆ ಹೊರಬೇಕು. ರಾಜ್ಯಾದ್ಯಂತ ಗಸ್ತು ವ್ಯವಸ್ಥೆ ಹೆಚ್ಚಿಸಬೇಕು. ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಯುವತಿಗೆ ಸಾಂತ್ವನ ಹೇಳದಿರುವುದು. ಚಿಕಿತ್ಸೆ ಕೊಡಿಸುವ ಬಗ್ಗೆ ತಾತ್ಸಾರ ಮಾಡಿದ್ದು, ರಕ್ತಸ್ರಾವ ನಿಲ್ಲದೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದ್ದೇಕೆ? ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿಯೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅತ್ಯಾಚಾರಿಗಳು ಯಾರೇ ಆದರೂ ಅವರಿಗೆ ಶೀಘ್ರ ಕಠಿಣ ಶಿಕ್ಷೆ ವಿಧಿಸಬೇಕು ಎಂದರು. ಇದಕ್ಕೆ ಎಂ.ನಾರಾಯಣಸ್ವಾಮಿ, ವೀಣಾ ಅಚ್ಚಯ್ಯ, ತಿಪ್ಪೇಸ್ವಾಮಿ, ನಸೀರ್ ಅಹ್ಮದ್ ಸೇರಿ ಹಲವರು ದನಿಗೂಡಿಸಿದರು.

ರಾಜೀನಾಮೆ ಕೊಟ್ಟಿದ್ದ ರಾಮರಾಯರು

ನಿಜಲಿಂಗಪ್ಪ ಸರ್ಕಾರದ ಅವಧಿಯಲ್ಲಿ ಮಧುಗಿರಿ ಅತ್ಯಾಚಾರ ಪ್ರಕರಣ ಉಲ್ಲೇಖಿಸಿ, ‘ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೀಗೆ ಆಗಿದ್ದರೆ ಏನು ಮಾಡುತ್ತಿದ್ದಿರಿ’ ಎಂದು ಪ್ರತಿಪಕ್ಷ ಸಾಲಿನಲ್ಲಿದ್ದ ಗೋಪಾಲಗೌಡರು ಆಗ ಗೃಹ ಸಚಿವರಾಗಿದ್ದ ರಾಮರಾಯರನ್ನು ಪ್ರಶ್ನಿಸಿದ್ದರು. ಆ ಒಂದು ಹೇಳಿಕೆಗೆ ತಕ್ಷಣವೇ ರಾಮರಾಯರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಟುಹೋದರು. ಇದು ಇದೇ ವಿಧಾನಸಭೆಯಲ್ಲಿ ನಡೆದ ಪ್ರಕರಣ. ಅಂತಹ ಸೂಕ್ಷ್ಮತೆ ಈಗಿಲ್ಲ ಎಂದು ಸಿದ್ದರಾಮಯ್ಯ ವಿಷಾದಿಸಿದರು.

ಕೇಸ್ ವರ್ಗಕ್ಕೆ ನಿರ್ಧಾರ

ಈ ಪ್ರಕರಣವನ್ನು ಫಾಸ್ಟ್ ಟ್ರಾ್ಯಕ್ ಕೋರ್ಟ್​ಗೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿಯನ್ನು ಕೋರಲು ಸರ್ಕಾರ ನಿರ್ಧರಿಸಿದೆ. ಜತೆಗೆ ಸರ್ಕಾರದ ಕಡೆಯಿಂದ ವಿಶೇಷ ವಕೀಲರ ನೇಮಕ ಮಾಡಲು ನಿರ್ಧರಿಸಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ರೇಪಿಸ್ಟ್​ಗಳ ಪುರುಷತ್ವ ಹರಣ ಮಾಡಿ

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿನ ತಪ್ಪಿತಸ್ಥರ ಪುರುಷತ್ವ ಹರಣ ಮಾಡಬೇಕು. ಅತ್ಯಾಚಾರಿಗಳಿಗೆ ತಪ್ಪದೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಹಿಳಾ ಸದಸ್ಯರು ಪರಿಷತ್​ನಲ್ಲಿ ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿದರು.

ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವ ಅಗತ್ಯತೆ ಬಗ್ಗೆ ಬಿಜೆಪಿಯ ಭಾರತಿ ಶೆಟ್ಟಿ ರ್ಚಚಿಸಿ, ಅತ್ಯಾಚಾರ ಪ್ರಕರಣಗಳಲ್ಲಿ ತ್ವರಿತವಾಗಿ ಶಿಕ್ಷೆ ವಿಧಿಸುವ ಬಗ್ಗೆ ಕಾನೂನು ತಜ್ಞರ ಸಮೇತ ಜಂಟಿ ಸದನ ಸಮಿತಿ ರಚಿಸಿ, ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. ತೇಜಸ್ವಿನಿ ಮಾತನಾಡಿ, ದೌರ್ಜನ್ಯಕ್ಕೊಳಪಟ್ಟ ಯುವತಿ, ಮಹಿಳೆಯರು ದೂರು ನೀಡಲು ಠಾಣೆಗಳಿಗೆ ತೆರಳಿದರೆ ಅಲ್ಲಿಯೂ ದೌರ್ಜನ್ಯ, ಮಾನಸಿಕ ಹಿಂಸೆ ನೀಡಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸುವುದಕ್ಕಾಗಿ ಮಹಿಳಾ ಶಾರ್ಪ್ ಶೂಟರ್ಸ್​ಗಳನ್ನೂ ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಪೊಲೀಸ್ ಇಲಾಖೆಯಲ್ಲಿ ನೇಮಿಸಿಕೊಳ್ಳಬೇಕು. ಶೋಷಿತ ಮಹಿಳೆಯರನ್ನು ಹಿಂಸಿಸುವ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net