

ಎನ್.ಆರ್.ಪುರ: ಭಾಗವತಿಕೆಯಲ್ಲಿ ಸಾಧನೆ ಮಾಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸೀತೂರು ಗುತ್ತಿ ಯಡೇಹಳ್ಳಿ ಗುತ್ಯಮ್ಮ ಯಕ್ಷಗಾನ ಮಂಡಳಿ ವ್ಯವಸ್ಥಾಪಕ ಅನಂತಪದ್ಮನಾಭ ಹೇಳಿದರು.
ಕಾಳಿಂಗ ನಾವುಡ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಭಾಗವತಿಕೆ ದಿಗ್ಗಜರಾಗಿದ್ದರು. ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಕಾಳಿಂಗ ನಾವುಡ ಅವರ ಭಾಗವತಿಕೆ ಶೈಲಿ ಬೇರೆಯಾಗಿತ್ತು. ಸುಬ್ರಹ್ಮಣ್ಯ ಧಾರೇಶ್ವರ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಸಂಗೀತ ಅಭ್ಯಾಸ ಮಾಡಿದ್ದರು. 400ಕ್ಕೂ ಹೆಚ್ಚು ಧ್ವನಿಸುರುಳಿ ಬಿಡುಗಡೆ ಮಾಡಿದ್ದಾರೆ. ಹೊಸ ರಾಗಗಳನ್ನು ಸಂಯೋಜನೆ ಮಾಡಿದ್ದಾರೆ. ಜಾನಪದ, ಭಾವಗೀತೆ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಯಕ್ಷಗಾನಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ ಸಂಗೀತವನ್ನು ಯಕ್ಷಗಾನದ ಶೈಲಿಯಲ್ಲಿ ಹಾಡಿದ್ದಾರೆ. ಅನೇಕ ಭಾಗವತರು ಕಾಳಿಂಗ ನಾವುಡ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಶೈಲಿಯನ್ನು ಅನುಕರಣೆ ಮಾಡಿದ್ದಾರೆ ಎಂದರು.
ಸೀತೂರಿನ ಗುತ್ಯಮ್ಮ ಯಕ್ಷಗಾನ ಮಂಡಳಿಯ ಹಲವಾರು ಪ್ರದರ್ಶನಗಳಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಭಾಗವತಿಕೆ ನಡೆಸಿಕೊಟ್ಟಿದ್ದರು. ಅವರ ಇಂಪಾದ ಕಂಠ ಕೇಳುಗರಿಗೆ ರೋಮಾಂಚನ ತರಿಸುತ್ತದೆ. ಪುರಂದರ ದಾಸರು, ಕನಕದಾಸರ ಕೀರ್ತನೆ, ಬಸವಣ್ಣನವರ ವಚನವನ್ನು ಯಕ್ಷಗಾನದಲ್ಲಿ ಪ್ರಯೋಗ ಮಾಡಿ ಯಕ್ಷಗಾನ ರಂಗವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಅವರು ಭಾಗವತಿಕೆಗೆ ತಾರಾಮೌಲ್ಯ ಗಳಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.