

ಕಾರಟಗಿ: ಲಸಿಕೆ ಕುರಿತು ತಿಳಿವಳಿಕೆ ಹಾಗೂ ಐದು ವರ್ಷದೊಳಗಿನ ಮಕ್ಕಳು ಮೃತಪಡುವುದನ್ನು ತಡೆಗಟ್ಟಲು ಸರ್ಕಾರ ಮಿಷನ್ ಇಂದ್ರಧನುಷ್ ಅಭಿಯಾನ ಜಾರಿಗೊಳಿಸಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಶ್ರೀಮಂತರು ತಮ್ಮ ಮಕ್ಕಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಭರಿಸಿ ಸಕಾಲದಲ್ಲಿ ಲಸಿಕೆಗಳನ್ನು ಹಾಕಿಸುತ್ತಾರೆ. ಬಡವರಲ್ಲಿ ಲಸಿಕೆ ಕುರಿತು ತಿಳಿವಳಿಕೆಯಿಲ್ಲದೆ ಐದು ವರ್ಷದೊಳಗಿನ ಮಕ್ಕಳು ಮೃತಪಡುತ್ತೇವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಮಕ್ಕಳ ಸಾವು ತಡೆಗಟ್ಟಲು ಮೂರು ತಿಂಗಳ ಕಾಲ ಲಸಿಕಾ ಅಭಿಯಾನ ರೂಪಿಸಿದೆ.
ಇದನ್ನೂ ಓದಿ: ಲಸಿಕೆವಂಚಿತ ಮಕ್ಕಳಿಗೆ ಇಂದ್ರಧನುಷ್ ಕೊಡಿಸಿ
ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಸರ್ವೇ ನಡೆಸಿ ಲಸಿಕೆ ಹಾಕಿಸಿಕೊಳ್ಳದ ಎರಡು ವರ್ಷದೊಳಗಿನ 5099 ಮಕ್ಕಳು, 2-5 ವರ್ಷದೊಳಗಿನ 510 ಮಕ್ಕಳು ಹಾಗೂ 1207 ಗರ್ಭಿಣಿಯರಿದ್ದಾರೆಂದು ತಿಳಿಸಿದೆ. ವೈದ್ಯರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು ಮಕ್ಕಳಿರುವಲ್ಲಿಗೆ ತೆರಳಿ ಲಸಿಕೆ ಹಾಕಬೇಕು. ಭವಿಷ್ಯದಲ್ಲಿ ಎದುರಾಗುವ ಆಪತ್ತನ್ನು ತಪ್ಪಿಸಬೇಕು ಎಂದು ತಿಳಿಸಿದರು.
ನಿಷ್ಠೆ, ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ನೆನೆಯುವುದಲ್ಲದೆ ಸಾರ್ವಜನಿಕವಾಗಿ ಅಭಿನಂದಿಸುತ್ತೇನೆ. ನಿಷ್ಕಾಳಜಿಯಿಂದ ನಡೆದುಕೊಳ್ಳುವವರನ್ನು ತಿದ್ದುವ ಕೆಲಸ ಮಾಡುತ್ತೇನೆ. ಜನರ ಸೇವೆ ಮಾಡಲು ಸಿಕ್ಕಿರುವ ಅವಕಾಶವನ್ನು ನನ್ನನ್ನು ಸೇರಿ ಎಲ್ಲರೂ ಪ್ರಾಮಾಣಿಕವಾಗಿ ನಿಭಾಯಿಸೋಣ ಎಂದರು.
100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6ಎಕರೆ ಜಮೀನು ದಾನಮಾಡಿದ ಎಲ್ವಿಟಿ ಸಮೂಹ ಸಂಸ್ಥೆಯ ಕೆ.ಸಣ್ಣಸೂಗಪ್ಪ, ಕೆ.ನಾಗಪ್ಪ ಸಹೋದರರನ್ನು ಎಂದೆಂದಿಗೂ ನೆನೆಯುತ್ತೇನೆ.
ಶೀಘ್ರ ಅನುದಾನ ಮಂಜೂರುಗೊಳಿಸಿ ಮುಖ್ಯಮಂತ್ರಿಯವರನ್ನು ಕರೆತಂದು ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಜತೆಗೆ ಸರ್ಕಾರದಿಂದ ಭೂದಾನಿಗಳನ್ನು ಸನ್ಮಾನಿಸಲಾಗುವುದು. ಆಸ್ಪತ್ರೆಗೆ ಭೂದಾನಿಗಳ ಹೆಸರಿಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಆಸ್ಪತ್ರೆಯಿಂದ ಎಲ್ವಿಟಿ ಸಮೂಹ ಸಂಸ್ಥೆಯ ಕೆ.ಸಣ್ಣಸೂಗಪ್ಪ, ಕೆ.ನಾಗಪ್ಪ ಸಹೋದರರನ್ನು ಸನ್ಮಾನಿಸಲಾಯಿತು.