ವೈದ್ಯರ ಕೊರತೆಯಿಂದ ಬಾಣಂತಿ, ಶಿಶುಗಳ ಸಾವು

6Manju5
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಡಾ.ಚಂದ್ರು ಲಮಾಣಿ ಮಾತನಾಡಿದರು. ಡಾ.ಸೋನಾಲಿ ಸರ್ನೋಬತ್, ಡಾ.ವಿಜಯಲಕ್ಷ್ಮೀ ತುಂಗಳ, ಡಾ.ಶೋಭಾ ನಿಸ್ಸಿಮಗೌಡರ, ಪ್ರದೀಪ ಕಡಾಡಿ, ನಿತಿನ್ ಚೌಗುಲೆ ಇತರರಿದ್ದರು.
Published on

ಬೆಳಗಾವಿ: ರಾಜ್ಯಾದ್ಯಂತ ಬಾಣಂತಿ, ನವಜಾತ ಶಿಶುಗಳ ಸಾವಿಗೆ ಕಳಪೆ ಔಷಧ, ವೈದ್ಯಕೀಯ ಸಾಮಗ್ರಿಗಳ ಪೂರೈಕೆ, ಭ್ರಷ್ಟಾಚಾರ ಹಾಗೂ ವೈದ್ಯರ ಕೊರತೆಯೇ ಕಾರಣ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ಅಧ್ಯಕ್ಷ, ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಲ್ಯ, ನಿರ್ಲಕ್ಷೃದಿಂದ ಬಾಣಂತಿ, ಶಿಶುಗಳ ಸರಣಿ ಸಾವಿನ ಹಿನ್ನೆಲೆ ಬಿಜೆಪಿ ಎರಡು ಸತ್ಯಶೋಧನಾ ಸಮಿತಿ ಕಲ್ಯಾಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕವಾಗಿ ಪ್ರವಾಸ ಕೈಗೊಂಡಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 700ಕ್ಕೂ ಹೆಚ್ಚು ಬಾಣಂತಿ, 1100 ಅಧಿಕ ನವಜಾತ ಶಿಶು ಮೃತಪಟ್ಟಿವೆ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರವೇ ಕಾರಣ: ಬಳ್ಳಾರಿ, ಬೆಳಗಾವಿ, ತಿಪಟೂರು, ಬೆಂಗಳೂರು, ಕೊಪ್ಪಳ, ರಾಯಚೂರು, ಕಲ್ಬುರ್ಗಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳ ವರದಿ ಪ್ರಕಾರ ಸರ್ಕಾರ ಬಳಸುತ್ತಿರುವ ಕಳಪೆ ಗುಣಮಟ್ಟದ ಔಷಧ (ರಿಂಗರ್ ಲ್ಯಾಕ್ವೆಟ್ ದ್ರಾವಣ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಕಾರಣವಾಗಿದ ಎಂದು ದೂರಿದರು.

ಸಚಿವರು ರಾಜೀನಾಮೆ ನೀಡಲಿ: ಗರ್ಭಿಣಿಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನ, ಸುರಕ್ಷಿತ ಮಾತೃತ್ವ ಆಶ್ವಾಸನ, ಪ್ರಧಾನಮಂತ್ರಿ ಮಾತೃವಂದನ ಯೋಜನೆ, ಮದರ್ ಆ್ಯಂಡ್ ಚೈಲ್ಡ್ ಪ್ರೊಟೆಕ್ಷನ್ ಕಾರ್ಡ್, ಪೋಷಣ್ ಅಭಿಯಾನ, ರಾಷ್ಟ್ರೀಯ ಬಾಲ್ ಸ್ವಾಸ್ಥ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಕೂಡಲೇ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ: ಬಾಣಂತಿ ಮತ್ತು ಶಿಶುಗಳ ಸಾವಿನ ಸತ್ಯ ಹೊರ ಬರಲು ಮತ್ತು ಸಾವು ನಿಯಂತ್ರಿಸಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಬಾಣಂತಿಯರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು.

ಮೃತ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಸರ್ಕಾರ ನಿಯಮ ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಡಾ.ಸೋನಾಲಿ ಸರ್ನೋಬತ್, ಡಾ.ವಿಜಯಲಕ್ಷ್ಮೀ ತುಂಗಳ, ಡಾ.ಶೋಭಾ ನಿಸ್ಸಿಮಗೌಡರ, ಶಿಲ್ಪಾ ಖೆಕರೆ, ಶಾಂಭವಿ ಅಶ್ವತಪುರ, ಮಂಜುನಾಥ ಪಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net