ಕೊಣಾಜೆಕಲ್ಲಿನಲ್ಲಿ ಯುವಕನ ಸಾವು

New Project (21)
Published on

ಪುತ್ತೂರು ಗ್ರಾಮಾಂತರ: ಚಾರಣಕ್ಕೆ ತನ್ನ ಗೆಳೆಯನೊಂದಿಗೆ ತೆರಳಿದ್ದ ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯೊಂದರ ಉದ್ಯೋಗಿಯಾದ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಯುವಕನೊಬ್ಬ ಮೂಡುಬಿದಿರೆ ಸಮೀಪದ ಕೊಣಾಜೆಕಲ್ಲು ಗುಡ್ಡದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಬೆಟ್ಟಂಪಾಡಿ ಗ್ರಾಪಂ ವ್ಯಾಪ್ತಿಯ ಇರ್ದೆ ಗ್ರಾಮದ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್ ಎನ್.(25) ಮೃತಪಟ್ಟವರು.

ಮಂಗಳೂರಿನ ರಾವ್ ಆ್ಯಂಡ್ ರಾವ್ ಚಾರ್ಟಡ್ ಅಕೌಂಟೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ್, ಕೇರಳದ ಅಡೂರು ನಿವಾಸಿ ಕಾರ್ತಿಕ್ ಬುಧವಾರ ಬೆಳಗ್ಗೆ ಕೊಣಾಜೆಕಲ್ಲು ಗುಡ್ಡಕ್ಕೆ ಚಾರಣಕ್ಕೆ ತೆರಳಿದ್ದರು. ಕೊಣಾಜೆಕಲ್ಲಿನ ತುದಿಗೆ ತಲುಪುತ್ತಿದ್ದಂತೆಯೇ ಮನೋಜ್ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಕೂಡಲೇ ಕಾರ್ತಿಕ್‌ಸ್ಥಳಕ್ಕೆ ಆಂಬುಲೆನ್ಸ್ ಕರೆಸಿಕೊಂಡು ಅಲ್ಲಿದ್ದ ಸಾರ್ವಜನಿಕರ ಸಹಕಾರದೊಂದಿಗೆ ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ದಿದ್ದರು. ಆ ವೇಳೆಗಾಗಲೇ ಮನೋಜ್ ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿ ಮೃತ ಮನೋಜ್ ಅವರ ತಂದೆ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೃದಯಾಘಾತದಿಂದ ತನ್ನ ಪುತ್ರ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net