ನೀರಿನ ಟ್ಯಾಂಕ್‌ನಲ್ಲಿ ಹಸುಗೂಸು ಶವಪತ್ತೆ

death
Published on

 ವಿಜಯವಾಣಿ ಸುದ್ದಿಜಾಲ ಆನೇಕಲ್

ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಮನೆ ಮೇಲಿನ ನೀರಿನ ಟ್ಯಾಂಕ್‌ನಲ್ಲಿ ಹಸುಗೂಸನ್ನು ಕೊಲೆ ಮಾಡಿರುವ ಪೈಶಾಚಿಕ ಪ್ರಕರಣ ನಡೆದಿದೆ. ಅರ್ಚಿತಾ ಹಾಗೂ ಮನು ದಂಪತಿಯ ತಿಂಗಳ ಕೂಸು ಹತ್ಯೆಯಾಗಿದ್ದು, ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಟ್ಟಿಲ್ಲಿದ್ದ ಮಗು ಕಾಣೆಯಾಗಿದ್ದು ಹೇಗೆ: ಅರ್ಚಿತಾ ಹಾಗೂ ಮನು ಅಂತರ್ಜಾತಿ ಪ್ರೇಮವಿವಾಹವಾಗಿದ್ದು, ಇಗ್ಗಲೂರು ಗ್ರಾಮದಲ್ಲಿ ಪಾಲಕರೊಂದಿಗೆ ನೆಲೆಸಿದ್ದರು. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ತಾಯಿ ಅರ್ಚಿತಾ ಶೌಚಕ್ಕೆ ಹೋಗಿದ್ದರು, ಮರಳಿ ಬರುವಷ್ಟರಲ್ಲಿ ತೊಟ್ಟಿಲಲ್ಲಿದ್ದ ಮಗು ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಮಗು ನಾಪತ್ತೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಈ ವೇಳೆ ಎಲ್ಲ ಕಡೆ ಹುಡುಕಾಟ ನಡೆಸಿ ಕಡೆಗೆ ಮನೆ ಮೇಲೆ ಪರಿಶೀಲನೆ ನಡೆಸುತ್ತಿದ್ದ ವೇಳೆ ನೀರಿನ ಟ್ಯಾಂಕ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗು ನಾಪತ್ತೆಯಾದ ವೇಳೆ ತಂದೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮಗುವಿನ ಅಜ್ಜಿಯೂ ಇರಲಿಲ್ಲ. ತಾಯಿ ಹಾಗೂ ಮಗು ಇಬ್ಬರೆ ಇದ್ದರು. ಈ ವೇಳೆ ಮಗು ನಾಪತ್ತೆಯಾದದ್ದಾರೂ ಹೇಗೆ ಎಂಬುದರ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದು ಹಲವರನ್ನು ವಿಚಾರಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net