ವಿದ್ಯುತ್ ತಂತಿ ತುಳಿದು ಸಾವು

Published on

ಮುಂಡಗೋಡ: ಶುಂಠಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಗದ್ದೆಯಲ್ಲಿದ್ದ ವಿದ್ಯುತ್ ತಂತಿ ತುಳಿದು ಒಬ್ಬ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದ ಬಸವರಾಜ ಚಂದ್ರಪ್ಪ ಹರಿಜನ(22) ಮೃತಪಟ್ಟಿದ್ದು, ಹರೀಶ ರಾಮಣ್ಣ ಹರಿಜನ ಗಾಯಗೊಂಡಿದ್ದಾನೆ. ತಾಲೂಕಿನ ಪಾಳಾ ಗ್ರಾಮದ ಮೂಕಪ್ಪ ಹರಿಜನ ಎಂಬಾತ ಓಣಿಕೇರಿ ಗ್ರಾಮದಲ್ಲಿ ಗದ್ದೆಯನ್ನು ಲಾವಣಿ ಪಡೆದು ಶುಂಠಿ ಬೆಳೆದಿದ್ದಾನೆ. ಕಾಡು ಪ್ರಾಣಿಗಳು ಬೆಳೆ ಹಾನಿ ಮಾಡಬಾರದೆಂದು ಗದ್ದೆಯ ಸುತ್ತಲೂ ವಿದ್ಯುತ್ ತಂತಿ ಅಳವಡಿಸಿದ್ದ. ಶುಂಠಿ ಬೆಳೆ ಕೀಳಲೆಂದು ಹಾನಗಲ್ಲ ತಾಲೂಕಿನಿಂದ ಕಾರ್ಮಿಕರು ಶುಕ್ರವಾರ ಆಗಮಿಸಿದ್ದರು. ಮಧ್ಯಾಹ್ನ ಗದ್ದೆಯಲ್ಲಿ ಊಟ ಮಾಡಲು ಹೋಗುವ ಸಮಯದಲ್ಲಿ ನೀರಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಸವರಾಜ ಮೃತಪಟ್ಟರೆ, ಹರೀಶ ಗಾಯಗೊಂಡಿದ್ದು, ತಕ್ಷಣವೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಬಸವರಾಜ ಸಾವನ್ನಪ್ಪಿರುವುದನ್ನು ದೃಢಪಡಿಸಿದರು. ಹರಿಶನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸಗೆ ಕಳುಹಿಸಲಾಗಿದೆ.

ಮನೆಯಿಂದ ಕೂಲಿ ಕೆಲಸಕ್ಕೆ ಹೋಗಿದ್ದ ಮಗ ಶವವಾಗಿ ಮನೆಗೆ ಬಂದಿರುವುದು ಕುಟುಂಬದವರು ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net