ಕಲ್ಲು ಎಳೆಯುವ ಎತ್ತಿಗೂ ಪುಣ್ಯತಿಥಿ

10-RNR-03
Published on

ರಾಣೆಬೆನ್ನೂರ: ಮನುಷ್ಯರು ಮೃತಪಟ್ಟಾಗ ಅವರ ಪುಣ್ಯತಿಥಿ ಆಚರಿಸಿ ಸಂಬಂಧಿಕರು, ಬಂಧು-ಬಳಗದವರಿಗೆ ಊಟ ಹಾಕುವುದು ಸಾಮಾನ್ಯ. ಆದರೆ, ಇಲ್ಲೊಂದು ರೈತ ಕುಟುಂಬ ತಮ್ಮ ನೆಚ್ಚಿನ ‘ಕಲ್ಲು ಎಳೆಯುವ ಎತ್ತು’ ಮೃತಪಟ್ಟ ಕಾರಣ ಅದರ ಪುಣ್ಯತಿಥಿ ಆಚರಿಸಿ, ಅನ್ನಸಂತರ್ಪಣೆ ಮಾಡುವ ಮೂಲಕ ಪ್ರೀತಿ ತೋರಿಸಿದ್ದಾರೆ.

ನಗರದ ಕುರುಬಗೇರಿಯ ರೈತರಾದ ಬಸಪ್ಪ ಗುಳಣ್ಣನವರ, ಶಿವಕುಮಾರ ಗುಳಣ್ಣನವರ, ನಾಗಪ್ಪ ಗುಳಣ್ಣನವರ ಎಂಬುವರ ಕಲ್ಲು ಎಳೆಯುವ ಸ್ಪರ್ಧೆಯ ಎತ್ತು ಸೆ. 2ರಂದು ಹೃದಯಾಘಾತದಿಂದ ಮೃತಪಟ್ಟಿತ್ತು. ಗುರುವಾರಕ್ಕೆ ಎತ್ತು ಮೃತಪಟ್ಟು 9 ದಿನ ಕಳೆದ ಹಿನ್ನೆಲೆಯಲ್ಲಿ ಬೆಳಗ್ಗೆ ಕುಟುಂಬದವರು, ಸಂಬಂಧಿಕರು ಸೇರಿ ಎತ್ತಿನ ಭಾವಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿಸಿದರು.

ಗೋಧಿ ಹುಗ್ಗಿ, ಅನ್ನದ ಕಿಚಡಿ, ಬದನೆಕಾಯಿ ಪಲ್ಲೆ, ಅನ್ನ-ಸಾಂಬರ್ ಅಡುಗೆ ಮಾಡಿ ನೈವೇದ್ಯ ಅರ್ಪಿಸಿದರು. ಮಧ್ಯಾಹ್ನದ ಸಮಯಕ್ಕೆ ತಮ್ಮ ಸಂಬಂಧಿಕರು ಹಾಗೂ ಬಂಧು-ಬಳಗದವರನ್ನು ಕರೆಯಿಸಿ ಊಟ ಬಡಿಸಿದರು. ಪುಣ್ಯತಿಥಿಗೆ ಬಂದವರು ಕೂಡ ಎತ್ತಿನ ಭಾವಚಿತ್ರಕ್ಕೆ ಹೂವು, ಹಣ್ಣ-ಕಾಯಿ ತಂದು ಪೂಜೆ ಸಲ್ಲಿಸಿದ್ದು, ವಿಶೇಷವಾಗಿತ್ತು.

ಶಿವಕುಮಾರ ಕುಟುಂಬದವರು 2001ರಲ್ಲಿ ಪಾಂಡವಪುರದಿಂದ ಎತ್ತನ್ನು ಖರೀದಿಸಿ ‘ಕಲ್ಲು ಎಳೆಯುವ ಹುಚ್ಚ’ ಎಂದು ನಾಮಕರಣ ಮಾಡಿದ್ದರು. 2001ರಿಂದ 2019ರವರೆಗೆ ರಾಣೆಬೆನ್ನೂರಿನ ಬೀರೇಶ್ವರ ಜಾತ್ರೆ, ಹಲಗೇರಿ, ಕಂಚಾಗಾರಗಲ್ಲಿ ಸೇರಿ ವಿವಿಧೆಡೆ ಏರ್ಪಡಿಸುತ್ತಿದ್ದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಎತ್ತು ಭಾರಿ ಸದ್ದು ಮಾಡಿತ್ತು.

5.5 ಟನ್ ತೂಕದ ಕಲ್ಲಿನಿಂದ ಹಿಡಿದು 11 ಟನ್ ತೂಕದ ಕಲ್ಲನ್ನು ಎಳೆಯುವ ಮೂಲಕ ಎತ್ತು ಜಿಲ್ಲೆಯಲ್ಲಿಯೇ ಹೆಸರು ಗಳಿಸಿತ್ತು. ಪ್ರತಿ ವರ್ಷದ ಸ್ಪರ್ಧೆಗಳನ್ನು ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಚಿನ್ನಾಭರಣ, ಬೆಳ್ಳಿ, ಟಿವಿ, ಬೈಕ್ ಸೇರಿ ನಾನಾ ಬಗೆಯ ಉಡುಗೊರೆಗಳನ್ನು ಗೆದ್ದುಕೊಂಡಿತ್ತು. ‘ಕಲ್ಲು ಎಳೆಯುವ ಹುಚ್ಚ’ ಸ್ಪರ್ಧೆಗೆ ಬಂದಿದ್ದಾನೆ ಎಂದರೆ, ಪ್ರಥಮ ಸ್ಥಾನ ಆತನದ್ದೆ ಎಂದು ಎಲ್ಲರೂ ನಿರ್ಧರಿಸುತ್ತಿದ್ದರು. ಸ್ಪರ್ಧೆ ನೋಡಲು ಸಾವಿರಾರು ಜನ ಸೇರುತ್ತಿದ್ದರು.

ಮನೆಯ ಮಗನಂತಿತ್ತು…: ಎತ್ತು ತಂದ ನಂತರ ಮನೆಯಲ್ಲಿ, ಕೃಷಿ ಸೇರಿ ತುಂಬಾ ಅನುಕೂಲವಾಗಿದೆ. ಹೀಗಾಗಿ ಎತ್ತು ಮೃತಪಟ್ಟಾಗಲೂ ಮೆರವಣಿಗೆ ಮೂಲಕ ಜಮೀನಿಗೆ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ. ಒಂದು ರೀತಿಯಲ್ಲಿ ಎತ್ತು ನಮಗೆ ಮನೆ ಮಗನಂತೆ ಇತ್ತು. ಮುಂದೆಯು ಕೂಡ ನಿತ್ಯವೂ ಎತ್ತಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಇತರ ಕಾರ್ಯ ಆರಂಭಿಸುತ್ತೇವೆ ಎಂದು ರೈತ ಶಿವಕುಮಾರ ‘ವಿಜಯವಾಣಿ’ ಎದುರು ಅಭಿಪ್ರಾಯ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net