4 ಜಾನುವಾರು ಅನುಮಾಸ್ಪದ ಸಾವು

cow
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು ಗುಂಜೂರು ಗ್ರಾಮದಲ್ಲಿ ಬುಧವಾರ 1 ಹಸು ಹಾಗೂ ಮೂರು ಕರುಗಳು ಅನುಮಾನ್ಪದವಾಗಿ ಸಾವನ್ನಪ್ಪಿವೆ.

ಗುಂಜೂರು ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ಪ್ರಕರಣ ನಡೆದಿದೆ. ಎಂದಿನಂತೆ ಜಾನುವಾರು ಮಾಲೀಕ ಮುನಿಯಪ್ಪ ಎಂಬುವರು ಜಾನುವಾರುಗಳ ಮೈತೊಳೆದು ಬೂಸ ನೀರು ಇಟ್ಟು ನಂತರ ಶೆಡ್‌ಗೆ ಕರೆದೊಯ್ಯುವ ವೇಳೆ ಜಾನುವಾರುಗಳು ದಿಢೀರ್ ಅಸ್ವಸ್ಥಗೊಂಡಿವೆ. ಈ ವೇಳೆ ಒಂದು ಹಸು 1 ಎಮ್ಮೆಯ ಕರು ಹಾಗೂ 2 ಹಸುವಿನ ಕರುಗಳು ಸ್ಥಳದಲ್ಲೇ ಮೃತಪಟ್ಟಿವೆ. ಜತೆಯಲ್ಲಿದ್ದ ಇನ್ನು ನಾಲ್ಕು ಹಸುಗಳು ಅಸ್ಪಸ್ಥಗೊಂಡಿದ್ದು ತಕ್ಷಣ ಪಶುಪಾಲನ ಇಲಾಖೆ ವೈದ್ಯರಿಂದ ಚಿಕಿತ್ಸೆ ದೊರೆತ ಕಾರಣ ಚೇತರಿಸಿಕೊಂಡಿವೆ ಎನ್ನಲಾಗಿದೆ.

ನೀರಿನಲ್ಲಿ ವಿಷ ಬೆರೆಸಿರುವ ಶಂಕೆ: ಶೆಡ್ ಪಕ್ಕದಲ್ಲಿನ ತೊಟ್ಟಿಯಲ್ಲಿ ಎಂದಿನಂತೆ ಜಾನುವಾರುಗಳಿಗೆ ನೀರು ಕುಡಿಸಲಾಗಿದೆ, ಬೂಸ ಹಾಗೂ ನೀರು ಸೇವಿಸಿದ ಬಳಿಕ ಪ್ರಕರಣ ನಡೆದಿರುವುದರಿಂದ ನೀರಿನಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪಶುಪಾಲನಾ ಇಲಾಖೆ ಅಧಿಕಾರಿಗಳು ಭೇಟಿ ನೀರಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ನೀರು ಹಾಗೂ ಬೂಸಾ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಳಿಕ ವಾಸ್ತವಾಂಶ ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಯಿಂದ ಪರಿಹಾರ: ದಿಢೀರ್ ಮೃತಪಟ್ಟ ಜಾನುವಾರುಗಳಿಗೆ ವಿಮೆ ಮಾಡಿಸಿದ್ದರೆ ವಿಮೆ ಹಣ ಬರಲಿದೆ, ಪಶುಪಾಲನಾ ಇಲಾಖೆ ವತಿಯಿಂದ ಕಾಮಧೇನು ಯೋಜನೆಯಡಿ ತಲಾ 15 ಸಾವಿರ ರೂಪಾಯಿ ಪರಿಹಾರ ದೊರೆಯಲಿದೆ ಎಂದು ಜಿಲ್ಲಾ ಪಶುಪಾಲನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಜೂರು ಗ್ರಾಮದಲ್ಲಿ ಜಾನುವಾರುಗಳು ಮೃತಪಟ್ಟ ಮಾಹಿತಿ ಹಿನ್ನೆಲೆಯಲ್ಲಿ ಪಶುಪಾಲನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 4 ಜಾನುವಾರು ಮೃತಪಟ್ಟಿದ್ದು, ಉಳಿದ ಜಾನುವಾರುಗಳು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿವೆ. ಯಾವ ಕಾರಣಕ್ಕೆ ದಿಢೀರ್ ಮೃತಪಟ್ಟಿವೆ ಎಂಬುದರ ತನಿಖೆಗಾಗಿ ನೀರು ಹಾಗೂ ಬೂಸಾ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ.

ಡಾ.ಜಗದೀಶ್, ಉಪನಿರ್ದೇಶಕ ಪಶುಪಾಲನಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net