ಹೊಸಕೋಟೆ ಪಟ್ಟಣದಲ್ಲಿ ಜಿಂಕೆ ಪ್ರತ್ಯಕ್ಷ

dear
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ಭಾಗಗಳಲ್ಲಿ ಆಗಾಗ ಆನೆಗಳು ಕಾಣಿಸಿಕೊಳ್ಳುವುದು, ಹಾಗೆಯೇ, ತೂಬಗೆರೆ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ದರ್ಶನ ಸಾಮಾನ್ಯವಾಗಿದೆ. ಆದರೆ ಇದೇ ಮೊದಲ ಬಾರಿಗೆ ಹೊಸಕೋಟೆಯ ಜನನೀಬಿಡ ಪ್ರದೇಶದಲ್ಲಿ ಜಿಂಕೆಯೊಂದು ಪ್ರತ್ಯಕ್ಷವಾಗಿ ಜನರನ್ನು ಅಚ್ಚರಿಗೊಳಿಸಿದೆ.
ಹೊಸಕೋಟೆ ಹೃದಯಭಾಗವಾದ ಮೇಲ್ಸೇತುವೆ ಕೆಳಗೆ ಗುರುವಾರ ಸಂಜೆ ಕಾಣಿಸಿಕೊಂಡ ಸುಮಾರು 4 ವರ್ಷದ ಜಿಂಕೆಯನ್ನು ಕಂಡು ಸಾರ್ವಜನಿಕರು ಆಶ್ಚರ್ಯಗೊಂಡರು. ಜಿಂಕೆ ಕಾಣಿಸಿಕೊಂಡ ಸುದ್ದಿ ಹರಡುತ್ತಿದ್ದಂತೆ ತಂಡೋಪತಂಡವಾಗಿ ಜನ ಸ್ಥಳದಲ್ಲಿ ಜಮಾಯಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ವಾಹನದಟ್ಟಣೆ ಏರ್ಪಟ್ಟಿತ್ತು. ವಿಷಯ ತಿಳಿದ ಹೊಸಕೋಟೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜಿಂಕೆಯನ್ನು ರಕ್ಷಣೆ ಮಾಡಿ ನಲ್ಲಾಳ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ರವಾನಿಸಿದರು.


ಸಾಮಾನ್ಯವಾಗಿ ಜಿಂಕೆಗಳು ಜನವಸತಿ ಪ್ರದೇಶಗಳತ್ತ ಬರುವುದಿಲ್ಲ. ಆನೆ ಹಾಗೂ ಚಿರತೆಯಂಥ ಪ್ರಾಣಿಗಳು ಆಗಾಗ ಕಾಡಂಚಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ, ಜಿಂಕೆಯೊಂದು ಇದೇ ಮೊದಲ ಬಾರಿಗೆ ನಗರ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ವಿಷಯ ತಿಳಿದ ಕೂಡಲೇ ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಸುಮೀತ್ ಪಾಟೀಲ್, ಉಪ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net