ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ; ಜಿಪಂ ಸಿಇಒ ರಿಷಿ ಆನಂದ

SHRAVANA UPAKARANA
ವಿಜಯಪುರದ ಬಾಲಕಿಯರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಭವನದಲ್ಲಿ ಜಿಪಂ ಸಿಇಒ ರಿಷಿ ಆನಂದ ಶ್ರವಣ ದೋಷಯುಳ್ಳ ವಿದ್ಯಾರ್ಥಿಗಳಿಗೆ ಶ್ರವಣೋಪಕರಣ ವಿತರಿಸಿದರು.
Published on

ವಿಜಯಪುರ: ಸಮಸ್ಯೆಗಳಿಗೆ ಕುಗ್ಗದೇ ಸಮರ್ಥವಾಗಿ ಎದುರಿಸಿ ಗುರಿ ಸಾಧಿಸಬೇಕೆಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ವಿ ಹೀಯರ್ ಸಂಸ್ಥೆ ಮತ್ತು ಯಸ್ ಬ್ಯಾಂಕ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರವಣ ದೋಷಯುಳ್ಳ ವಿದ್ಯಾರ್ಥಿಗಳಿಗೆ ಶ್ರವಣೋಪಕರಣಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲೂ ವಿಶೇಷವಾದ ಶಕ್ತಿ ಇರುತ್ತದೆ. ಅದನ್ನು ಗುರುತಿಸಿಕೊಳ್ಳಬೇಕು. ನಮ್ಮ ಸಾಮರ್ಥ್ಯ ಅರಿತು ಸಾಧನೆಯತ್ತ ಹೆಜ್ಜೆ ಹಾಕಬೇಕು. ಕೆಲವರಿಗೆ ಚಿತ್ರಕಲೆಯಲ್ಲಿ ವಿಶೇಷ ಜ್ಞಾನವಿದ್ದರೆ ಇನ್ನೂ ಕೆಲವು ವಿದ್ಯಾರ್ಥಿಗಳು ಆಟೋಟಗಳಲ್ಲಿ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಇಂತಹ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯವಾಗಿದೆ. ಗುರಿಯೊಂದಿಗೆ ನಿರಂತರ ಪ್ರಯತ್ನವೂ ನಿಮ್ಮದಾಗಿರಬೇಕು. ಗುರಿ ತಲುಪಲು ನಿರಂತರ ಪ್ರಯತ್ನ ಹಾಗೂ ಶ್ರಮ ಇರಬೇಕು. ಅಂದಾಗ ಮಾತ್ರ ನೀವು ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಂಡಿ ತಾಲೂಕಿನ -17, ಸಿಂದಗಿ-18 ಹಾಗೂ ವಿಜಯಪುರ ನಗರ ಮತ್ತು ಗ್ರಾಮೀಣ ಭಾಗದ 65 ವಿದ್ಯಾರ್ಥಿಗಳು ಸೇರಿದಂತೆ 100 ವಿದ್ಯಾರ್ಥಿಗಳಿಗೆ ಶ್ರವಣೋಪಕರಣಗಳನ್ನು ವಿತರಿಸಲಾಯಿತು.

ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಮುಖ್ಯೋಪಾಧ್ಯಾಯ ಸಿ.ಎಸ್. ಕಾಂಬಳೆ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಂ.ಎ. ಗುಳೆದಗುಡ್ಡ, ಯೋಜನಾ ಉಪಸಮನ್ವಯಾಧಿಕಾರಿ ಟಿ.ಎಸ್. ಕೋಲ್ಹಾರ, ಯಸ್ ಬ್ಯಾಂಕಿನ ವ್ಯವಸ್ಥಾಪಕ ಶಕೀಲ್ ಪಾಷಾ, ವಿ ಹೀಯರ್ ಸಂಸ್ಥೆಯ ಸಾಮಾಜಿಕ ಸಂವಹನಾಧಿಕಾರಿ ಶ್ರದ್ಧಾ ರಮೇಶ, ವಾಘೇಲಾ ಕುಲದೀಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net