ತೆಂಗಿಗೆ ಮಾರಣಾಂತಿಕ ಹುಳು ಭೀತಿ

coconut
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಕಾಡು ಪ್ರಾಣಿ ಹಾವಳಿ, ಮರ ಹತ್ತುವವರ ಕೊರತೆ, ಅನಿಶ್ಚಿತ ದರಗಳಂತಹ ಅನೇಕ ಸಮಸ್ಯೆ ಮಧ್ಯೆ ತಮ್ಮ ಮುಂದಿನ ತಲೆಮಾರಿಗೆ ತೆಂಗಿನ ಗಿಡ ನೆಡಲು, ಹೊಸ ತೋಟ ರಚನೆಗೆ ತೆಂಗು ಬೆಳೆಗಾರರಲ್ಲಿ ಉಳಿದಿರುವ ಅಲ್ಪಸ್ವಲ್ಪ ಆಸಕ್ತಿ ಕೆಂಪುಮೂತಿ ಹುಳುವಿನ ಭಾದೆ ಮಣ್ಣು ಪಾಲಾಗಿಸುತ್ತಿದೆ.

ಸಾಧಾರಣವಾಗಿ 5ರಿಂದ 20 ವರ್ಷದ ಗಿಡಗಳಿಗೆ ಮಾರಣಾಂತಿಕವಾಗಿ ಭಾದಿಸುತ್ತಿರುವ ವೈಜ್ಞಾನಿಕವಾಗಿ ರಿಂಕೋಪೋರಸ್ ಫೆರುಜೀನಿಯಸ್ ಎಂದು ಕರೆಯಲ್ಪಡುವ ಈ ದುಂಬಿ ಜೀವಿತಾವಧಿಯ ವಿವಿಧ ಹಂತ ಅಂದರೆ ಮೊಟ್ಟೆ ಗೊಣ್ಣೆ ಹುಳು, ಕೋಶಾವಸ್ಥೆ ಹಾಗೂ ಪ್ರಾಯದ ಸ್ಥಿತಿಗಳನ್ನು ತೆಂಗಿನ ಕಾಂಡದ ಒಳಗೆ ಪೂರೈಸುವುದರಿಂದ ಇದರ ಹಾನಿ ಪ್ರಾಥಮಿಕ ಹಂತದಲ್ಲಿ ಗುರುತಿಸುವುದು ಕಷ್ಟ.

ಹಾನಿ ಗುರುತಿಸುವಿಕೆ ಅಸಾಧ್ಯ

ಈ ಕೀಟ ಕಾಂಡದ ಭಾಗಕ್ಕೆ ಹಾವಳಿ ಮಾಡಿದ್ದಲ್ಲಿ ಕಾಂಡದಲ್ಲಿ ಸಣ್ಣ ರಂಧ್ರ ಹಾಗೂ ಅವುಗಳಿಂದ ಕಂದು ಬಣ್ಣದ ರಸ ಸೋರುವಿಕೆ ಕಂಡುಬರುತ್ತದೆ. ಮೇಲಿನ ಕೆಲ ಗರಿಗಳು ಸೊರಗಿ ಒಂದು ಭಾಗಕ್ಕೆ ಬಿದ್ದ ನಂತರವೇ ಹುಳುವಿನಿಂದ ಹಾನಿ ಕಂಡುಬರುತ್ತದೆ. ಕಾಂಡದ ಬುಡದಲ್ಲಿ ನಿಶಬ್ದ ವಾತಾವರಣದಲ್ಲಿ ಕಿವಿ ತಾಗಿಸಿದಲ್ಲಿ ಹುಳಗಳ ಕೊರೆಯುವಿಕೆ ಶಬ್ದ ಆಲಿಸಬಹುದು. ಹೆಣ್ಣು ದುಂಬಿ ಸಾಧಾರಣವಾಗಿ ಕುರುವಾಯಿ ದುಂಬಿಯಿಂದ ಉಂಟಾದ ಗಾಯ ಅಥವಾ ಇನ್ನಿತರೆ ಕಾರಣಗಳಿಂದ ಉಂಟಾದ ಗಾಯಗಳಲ್ಲಿ ಮೊಟ್ಟೆ ಇಡುತ್ತದೆ. ಮರಿಗಳು ಎರಡು ಮೂರು ದಿನಗಳಲ್ಲಿ ಮೊಟ್ಟೆಯಿಂದ ಹೊರಬಂದು ಮೃದು ಕಾಂಡದ ಒಳಗೆ ಹೊಕ್ಕು ತಿನ್ನಲು ಪ್ರಾರಂಭಿಸುತ್ತವೆ. ನಾರಿನಿಂದ ಮಾಡಲ್ಪಟ್ಟ ಕೋಶದೊಳಗೆ ಕೋಶಾವಸ್ಥೆ ಕಳೆದು ಪ್ರೌಢ ದುಂಬಿ ಹೊರಬರುತ್ತವೆ. ಒಟ್ಟು ಜೀವನ ಚಕ್ರ ನಾಲ್ಕು ತಿಂಗಳಲ್ಲಿ ಪೂರೈಸುತ್ತವೆ.

ನಿಯಂತ್ರಣ ಕ್ರಮಗಳು

ತೋಟದ ಸ್ವಚ್ಛತೆ ಹಾಗೂ ಕುರುವಾಯಿ ದುಂಬಿಗಳ ನಿಯಂತ್ರಣ ಮಾಡಬೇಕು. ತೆಂಗಿನ ತಲೆಭಾಗ ಸ್ವಚ್ಛಗೊಳಿಸಿ ಮೇ, ಸೆಪ್ಟೆಂಬರ್, ಡಿಸೆಂಬರ್ ಸಮಯಗಳಲ್ಲಿ ಸೂಕ್ತ ಕೀಟನಾಶಕ ಸುಳಿ ಭಾಗದಲ್ಲಿ ಹಾಕಬೇಕು. ಕೀಟದ ಭಾದೆಗೆ ಸತ್ತು ಹೋದ ಮರಗಳನ್ನು ಕಡಿದು ಸುಡಬೇಕು. ಕಾಂಡದ ಭಾಗದಲ್ಲಿ ಕೀಟ ಒಳಹೋಗಿದ್ದಲ್ಲಿ ಎಲ್ಲ ರಂಧ್ರ ಮುಚ್ಚಿ ಮೇಲಿನ ಒಂದು ರಂಧ್ರದಲ್ಲಿ ಕ್ಲೋರೋಪೈರಿಫಾಸ್ ಕೀಟನಾಶಕ ಒಂದು ಲೀಟರ್ ನೀರಿನಲ್ಲಿ 5 ಮಿ.ಲೀ ಬೆರೆಸಿ ಒಳಗೆ ಸುರಿಯಬೇಕು. ಹೆಕ್ಟರಿಗೆ ಒಂದರಂತೆ ಮೋಹಕಬಲೆ ಬಳಸಬೇಕು. ಮೋಹಕ ಬಲೆಗಳನ್ನು ತೆಂಗಿನ ಮರಗಳಿಗೆ ನೇರವಾಗಿ ಕಟ್ಟದೆ, ತೋಟದಿಂದ ಸ್ವಲ್ಪ ದೂರದಲ್ಲಿ ಕಾಡು ಮರಗಳಿಗೆ ಕಟ್ಟಬೇಕು. ಮೋಹಕ ಬಲೆಗಳಲ್ಲಿನ ಫೆರೋಮೋನ್ ಮೂರರಿಂದ ನಾಲ್ಕು ತಿಂಗಳ ಅವಧಿ ಹೊಂದಿದ್ದು ನಂತರದಲ್ಲಿ ಬದಲಾಯಿಸಬೇಕು. ನೈಸರ್ಗಿಕ ಮೋಹಕಬಲೆಗಳ ತಯಾರಿಗಾಗಿ ಒಂದು ಲೀಟರ್ ನೀರಿನಲ್ಲಿ 150 ಗ್ರಾಂ ಬಾಳೆಹಣ್ಣು, 2 ಈಸ್ಟ, 2 ಗ್ರಾಂ ಕಾರ್ಬೋರಿಲ ಸೇರಿಸಿ ಕಟ್ಟುವುದರಿಂದ ದುಂಬಿಗಳನ್ನು ಆಕರ್ಷಿಸಬಹುದು. ದುಂಬಿಗಳು ಕೊಳೆತ ಪದಾರ್ಥ ಹಾಗೂ ಮರದ ಗಾಯಗಳಿಗೆ ಆಕರ್ಷಿತವಾಗುವುದರಿಂದ ಹಸಿ ಗರಿಗಳನ್ನು ಕತ್ತರಿಸುದನ್ನು ಆದಷ್ಟೂ ಕಡಿಮೆ ಮಾಡಬೇಕು. ಅತೀ ಅವಶ್ಯವಿದ್ದಲ್ಲಿ ಕನಿಷ್ಠ ಒಂದು ಮೀಟರ್ ಮರದಿಂದ ಬಿಟ್ಟು ಗರಿಗಳನ್ನು ಕತ್ತರಿಸಬೇಕು.

ತೆಂಗಿನ ಹೊಸ ತೋಟಗಳಿಗೆ ಮಾರಣಾಂತಿಕ ಕೆಂಪು ಮೂತಿ ಹುಳು ಭಾದೆಯಾಗಿದೆ. ಸಣ್ಣ ಪ್ರಾಯದ ತೆಂಗಿನ ಮರಗಳಿಗೆ ಹೆಚ್ಚು ಪರಿಣಾಮ ಬೀರುತ್ತದೆ. ಸಮರ್ಪಕ ನಿಯಂತ್ರಣ ಕ್ರಮ ಬಳಸಿದಲ್ಲಿ ತೆಂಗಿನ ತೋಟ ರಕ್ಷಣೆ ಸಾಧ್ಯ. ಕರಾವಳಿ ಅಲ್ಲಲ್ಲಿ ರೈತರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ಇದರ ಬಗ್ಗೆ ನಿಗಾ ವಹಿಸಬೇಕು. -ಶ್ರೀನಿವಾಸ್ ಬಿ.ವಿ. ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ ಕಾರ್ಕಳ ಬೆಳವಣಿಗೆ ಹಂತದಲ್ಲಿದ್ದ ತೆಂಗಿನ ಮರ ಕೀಟಬಾಧೆಯಿಂದ ಸತ್ತಿರುವುದು ನಿಜಕ್ಕೂ ದುರದೃಷ್ಟಕರ. ರೋಗದ ಲಕ್ಷಣ ನಮಗೆ ಗೋಚರಿಸದೆ, ನಿಯಂತ್ರಣ ಕ್ರಮ ಅಳವಡಿಸಲು ಕಷ್ಟವಾಯಿತು. ಸಣ್ಣ ಮಟ್ಟದಲ್ಲಿ ಮನೆ ಉಪಯೋಗಕ್ಕೆ ತೆಂಗು ಬೆಳೆದಿದ್ದೇವೆ. ಅದು ನಾಶವಾಗಿರೋದು ಬೇಸರ ತಂದಿದೆ. -ಕಲಾವತಿ ರೈತ ಮಹಿಳೆ https://www.vijayavani.net/fraud-on-the-pretext-of-investment https://www.vijayavani.net/two-people-arrested-for-gambling

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net