ಮುಂದಿನ ಪೀಳಿಗೆಗೆ ಮಾರಕ ಕೃತಕ ಬುದ್ಧಿಮತ್ತೆ - ಡಾ.ನಿಂಗಪ್ಪ ಮುದೇನೂರು ಅಭಿಮತ

18-feb-hdl-02
ಹೂವಿನಹಡಗಲಿಯಲ್ಲಿ ಭಕ್ತ ಹಿತಚಿಂತನಾ ಸಭೆಯಲ್ಲಿ ಕರ್ನಾಟಕ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಅವರಿಗೆ ಶ್ರೀಮಠದಿಂದ ಗವಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ, ಡಾ.ಹಿರಿಶಾಂತವೀರ ಸ್ವಾಮೀಜಿ ಇತರರಿದ್ದರು.
Published on

ಹೂವಿನಹಡಗಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮನುಷ್ಯನ ಮಿದುಳಿನ ಮೇಲೆ ಅಧಿಕಾರ ಸ್ಥಾಪಿಸಲಿದೆ. ಈ ಮೂಲಕ ಉದ್ಯೋಗಗಳನ್ನು ಕಸಿಯಲಿದೆ ಎಂದು ಕರ್ನಾಟಕ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಹೇಳಿದರು.

ಪಟ್ಟಣದ ಗವಿಸಿದ್ದೇಶ್ವರ ಸ್ವಾಮಿಯ 30ನೇ ವರ್ಷದ ಜಾತ್ರೋತ್ಸವದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಹಿತಚಿಂತನಾ ಸಭೆ ಹಾಗೂ ಗವಿಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃತಕ ಬುದ್ದಿಮತ್ತೆ ಮಾನವನ ಬುದ್ಧಿಶಕ್ತಿಯನ್ನು ಕುಬ್ಜಗೊಳಿಸುತ್ತದೆ. ಇದು ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ಈ ಕುರಿತು ಯುವ ಜನತೆಯನ್ನು ಎಚ್ಚರಿಸಬೇಕು ಎಂದರು.

ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಕಾಯಕ ಮತ್ತು ದಾಸೋಹ ತತ್ವಗಳು ಆತ್ಮಗೌರವದ ಪ್ರತೀಕವಾಗಿವೆ. ಮಠಗಳು ಕಾಯಕದ ಬಗ್ಗೆ ಅರಿವು ಮೂಡಿಸುವ ಜತೆಗೆ ದಾಸೋಹ ಸೇವೆ ಮಾಡುತ್ತಿವೆ. ಶರಣರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ನಂತರ ಗವಿಶ್ರೀ ಅಕ್ಕನ ಬಳಗದಿಂದ ‘ಕೃಷ್ಣ ಸುಧಾಮರ ಗೆಳೆತನ’ ಕಿರುನಾಟಕ ಪ್ರದರ್ಶಿಸಲಾಯಿತು.

ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ, ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಅಗಡಿಯ ಗುರುಸಿದ್ದ ಸ್ವಾಮೀಜಿ, ಇಟಗಿಯ ಗುರುಶಾಂತ ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಹೊಳಲಿನ ಮಲ್ಲಿಕಾರ್ಜುನ ದೇವರು, ಡಾ.ಹಿರಿಶಾಂತವೀರ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net