ರಸ್ತೆಗುಂಡಿ ಮುಚ್ಚಲು ಅ.31 ರವರೆಗೆ ಗಡುವು: ಡಿಸಿಎಂ ಡಿಕೆಎಸ್​​ ಹೇಳಿಕೆ

gba board
Published on

ಬೆಂಗಳೂರು: ಮಹಾನಗರದ ಎಲ್ಲ ರಸ್ತೆಗಳನ್ನು ಸರಿಪಡಿಸಲು ಮುಖ್ಯಮಂತ್ರಿಯವರು ಪಾಲಿಕೆ ಅಧಿಕಾರಿಗಳಿಗೆ ಅ.31ರ ವರೆಗೆ ಗಡುವು ನೀಡಿದ್ದಾರೆ. ಈ ಮಧ್ಯೆ ರಸ್ತೆಗುಂಡಿ ಮುಚ್ಚಲು ಹೆಚ್ಚುವರಿ 750 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ರಸ್ತೆಗಳ ಸುಧಾರಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕುರಿತು ಸಿಎಂ ನಿವಾಸ ಕಾವೇರಿಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆ ಬಳಿಕ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪಾಲಿಕೆ ಅಧಿಕಾರಿಗಳು, ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ನಾವು ನಗರದಲ್ಲಿ 10 ಸಾವಿರ ರಸ್ತೆಗುಂಡಿ ಪತ್ತೆ ಮಾಡಿದ್ದೇವೆ. ಇವುಗಳನ್ನು ಸರಿಪಡಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ರಸ್ತೆಗುಂಡಿಗಳ ಪಟ್ಟಿ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೆ ಆದಷ್ಟು ಬೇಗ ಅವುಗಳನ್ನು ಮುಚ್ಚಲಾಗುವುದು. ಮಳೆಗಾಲ ಮುಕ್ತಾಯದ ನಂತರ ಪ್ರತ್ಯೇಕ ಯೋಜನೆ ರೂಪಿಸಲು ಸಿಎಂ ನಿರ್ದೇಶನ ನೀಡಿದ್ದಾರೆ ಎಂದು ಡಿಸಿಎಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net