

ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ಕರೊನಾ ಬಳಿಕ ದಿನೇದಿನೆ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಸೀದಿ, ದೇವಸ್ಥಾನ ಸೇರಿ ವಾಣಿಜ್ಯ ಮಳಿಗೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವಂತೆ ಪೊಲೀಸರು ಗಡುವು ನೀಡಿದ್ದಾರೆ. ಕರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳೂ ಪೊಲೀಸರು ನೋಟಿಸ್ ನೀಡಿದ್ದಾರಲ್ಲದೆ, ಹದಿನೈದು ದಿನಗಳೊಳಗೆ ಕ್ಯಾಮರಾ ಹಾಕಿಸಿಕೊಳ್ಳದಿದ್ದರೆ ಹೆಚ್ಚಿನ ದಂಡ ವಿಧಿಸುವುದಾಗಿ ಧಮ್ಕಿ ಹಾಕಿದ್ದಾರೆ.
ನಗರಸಭೆ, ಪಾಲಿಕೆಗಳಲ್ಲಿ ಕಡ್ಡಾಯ: ಕರ್ನಾಟಕ ಸಾರ್ವಜನಿಕ ಸುರಕ್ಷೆಯ (ಕ್ರಮಗಳ) ಜಾರಿ ಅಧಿನಿಯಮ-2018ರ ಅಡಿ ಎಲ್ಲ ಪಪಂ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ವಾಣಿಜ್ಯ, ಶಿಕ್ಷಣ, ಧಾರ್ವಿುಕ ಕೇಂದ್ರಗಳಲ್ಲಿ ಸ್ಥಳದ ಘಟನಾವಳಿಗಳನ್ನು ದಾಖಲು ಮಾಡಿಕೊಳ್ಳಲು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. 2018ರಲ್ಲಿ ಈ ಕಾನೂನು ಬಂದಿದ್ದು ಕರೊನಾ ನಂತರ ಹೆಚ್ಚಿರುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಈಗ ಬಳಸಿಕೊಳ್ಳಲು ಮುಂದಾಗಿದೆ.
3 ವರ್ಷಗಳ ಬಳಿಕ ಎಚ್ಚೆತ್ತುಕೊಂಡಿರುವ ಇಲಾಖೆಯು ಅಧಿನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ತುಮಕೂರು ಉಪವಿಭಾಗದ ಠಾಣಾಧಿಕಾರಿಗಳು, ಪಾಲಿಕೆ ವ್ಯಾಪ್ತಿಯ ಮಸೀದಿ, ದೇವಸ್ಥಾನಗಳು, ವಾಣಿಜ್ಯ ಮಳಿಗೆಗಳು, ಶಿಕ್ಷಣ ಕೇಂದ್ರಗಳಲ್ಲಿ 30 ದಿನಗಳ ಸ್ಟೋರೇಜ್ ಸಾಮರ್ಥ್ಯವುಳ್ಳ ಕ್ಯಾಮರಾ ಅಳವಡಿಸುವಂತೆ ವ್ಯಾಪಾರಿಗಳ, ಶಿಕ್ಷಣ ಸಂಸ್ಥೆ, ಧಾರ್ವಿುಕ ಕೇಂದ್ರಗಳ ಮುಖ್ಯಸ್ಥರ ಸಭೆ ಕರೆದು ಸೂಚನೆ ನೀಡಿದ್ದಾರೆ.
ನೋಟಿಸ್ ಜಾರಿ: ಈ ಸಂಬಂಧ ಪ್ರತೀ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿರುವ ಪೊಲೀಸರು ಕಡ್ಡಾಯವಾಗಿ ಉತ್ಕೃಷ್ಟ ಮಟ್ಟದ ತಾಂತ್ರಿಕ ವೈಶಿಷ್ಟ್ಯಉಳ್ಳ ಸಿಸಿ ಕ್ಯಾಮರಾ ಅಳವಡಿಸುವಂತೆ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳದಿದ್ದರೆ ಅಧಿನಿಯಮ ಕಲಂ 6, 7 ರೀತ್ಯಾ ಶಿಕ್ಷಾರ್ಹ ಅಪರಾಧವಾಗಿದ್ದು 10 ಸಾವಿರ
ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಜನಸ್ನೇಹಿ ಎಂದು ಬಿಂಬಿಸಿಕೊಳ್ಳುವ ಪೊಲೀಸರ ಹಿಟ್ಲರ್ ನೀತಿಗೆ ಇದು ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾವಿಷ್ಣು ಎಂಟರ್ಪ್ರೖೆಸಸ್ನಲ್ಲೇ ಖರೀದಿಸಲು ಒತ್ತಡ?
ಸಿಸಿ ಕ್ಯಾಮರಾ ಕಡ್ಡಾಯ ಜಾರಿಗೆ ಸಂಬಂಧಿಸಿದ ಸಭೆಗಳಿಗೆ ಸಿಸಿ ಕ್ಯಾಮರಾ ಡೀಲರ್ ಮಹಾವಿಷ್ಣು ಎಂಟರ್ಪ್ರೖೆಸಸ್ನವರನ್ನು ಕರೆಸಿ ಉತ್ಕೃಷ್ಟ ಗುಣಮಟ್ಟದ ಕ್ಯಾಮರಾ ಖರೀದಿಸಲು ಪೊಲೀಸರು ಮಾಹಿತಿ ಹಂಚಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 2 ಕ್ಯಾಮರಾ, ವೈರ್ಲೆಸ್ ಸಿಸ್ಟ್ಂಗೆ 13 ಸಾವಿರ ರೂಪಾಯಿ, ಡಿಸ್ಪ್ಲೇ ಬರುವ ಸಿಸಿ ಕ್ಯಾಮರಾ ಸಿಸ್ಟ್ ಂಗೆ 18 ಸಾವಿರ ರೂ., ತಗುಲಲಿದ್ದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಇದು ದೊಡ್ಡ ಹೊರೆಯಾಗಲಿದೆ.
ಈ ಹಿಂದೆಯೇ ಜಿಲ್ಲಾಮಟ್ಟದ ಸಭೆ ಕರೆದು ವ್ಯಾಪಾರಿಗಳಿಗೆ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಲಾಗಿತ್ತು. ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಡ್ಡಾಯವಾಗಿ ನಿಯಮ ಜಾರಿಗೊಳಿಸಲಾಗುತ್ತಿದೆ. ಜನಸಾಂದ್ರತೆ ಹೆಚ್ಚಿರುವ ಅಂಗಡಿ ಮಳಿಗೆಗಳಿಗೆ ಉತ್ಕೃಷ್ಟ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಕೂಡ ಜಾಸ್ತಿ ಇದೆ. ಅದರ ಬದಲು ವ್ಯಾಪಾರಿಗಳು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದು ಸೂಕ್ತ. | ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಖ್ಯರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಸಾಕು. ಪ್ರತಿಯೊಂದು ಅಂಗಡಿ, ಮಳಿಗೆಗೆ ದುಬಾರಿ ವೆಚ್ಚದ ಸಿಸಿ ಕ್ಯಾಮರಾ ಅಳವಡಿಸುವಂತೆ ಪೊಲೀಸರು ನೋಟಿಸ್ ನೀಡಿದ್ದಲ್ಲದೆ, ನೋಟಿಸ್ ಪ್ರತಿಗೆ ಸಹಿ ಹಾಕಲೇಬೇಕೆಂದು ಒತ್ತಡ ಹೇರಲಾಗಿದೆ. 15 ದಿನದೊಳಗೆ ಸಿಸಿ ಕ್ಯಾಮರಾ ಹಾಕಿಸದಿದ್ದರೆ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಲಾಗಿದೆ. | ಹೆಸರು ಹೇಳಲಿಚ್ಛಿಸದ ವ್ಯಾಪಾರಿ ತುಮಕೂರು