

ಬಾಗಲಕೋಟೆ: ಕೃಷ್ಣಾ, ಮಹದಾಯಿ, ನವಲಿ ನೀರಾವರಿ ಯೋಜನೆ ಎರಡು ವರ್ಷದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಆರಂಭಗೊಂಡಿದ್ದ ಸಂಕಲ್ಪ ಯಾತ್ರೆಯ ಐದು ದಿನಗಳ ಟ್ರ್ಯಾಕ್ಟರ್ ರ‍್ಯಾಲಿ ಭಾನುವಾರ ಸಂಜೆ ಮುಕ್ತಾಯಗೊಂಡಿತು. ಕಾಂಗ್ರೆಸ್ ಮಾಜಿ ಸಚಿವ ಎಸ್.ಆರ್. ಪಾಟೀಲ ನೇತೃತ್ವದ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಏ.13ರಂದು ಗದಗ ಜಿಲ್ಲೆಯ ನರಗುಂದದಿಂದ ಆರಂಭವಾಗಿದ್ದ ಟ್ರ್ಯಾಕ್ಟರ್ ರ‍್ಯಾಲಿ ಭಾನುವಾರ ಸಂಜೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಮುಕ್ತಾಯವಾಯಿತು. ರ‍್ಯಾಲಿ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್. ಪಾಟೀಲ, ನಮ್ಮ ಹೋರಾಟ ಯಾವುದೇ ಪಕ್ಷ, ಸರ್ಕಾರ, ವ್ಯಕ್ತಿಯ ವಿರುದ್ಧವಲ್ಲ. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ್ದೇವೆ. ಇದು ನಮ್ಮ ಬದುಕಿನ ಪ್ರಶ್ನೆ. ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗಿವೆ. ಆದರೆ, ಇನ್ನೂ ಸಿಗಬೇಕಾದ ಸೌಲಭ್ಯ ಉತ್ತರ ಕರ್ನಾಟಕ್ಕೆ ಸಿಕ್ಕಿಲ್ಲ. ಅವುಗಳನ್ನು ಪಡೆಯುವುದೇ ಹೋರಾಟದ ಗುರಿ ಎಂದರು. ನಮ್ಮ ಈ ಹೋರಾಟ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಕೂಗು ಅಲ್ಲ. ಅದಕ್ಕೆ ನಮ್ಮ ಒಪ್ಪಿಗೆಯೂ ಇಲ್ಲ, ಆ ಕುರಿತು ಧ್ವನಿಯನ್ನೂ ಎತ್ತುವುದಿಲ್ಲ. ಈ ಹೋರಾಟ ನಮ್ಮ ಪಾಲಿನ ಹಕ್ಕಿಗಾಗಿ, ನಮ್ಮ ಸೌಲಭ್ಯಗಳಿಗಾಗಿ. ಅಸಮಾನತೆ ತೊಲಗಬೇಕು ಎನ್ನುವುದಕ್ಕಾಗಿ ಈ ಹೋರಾಟ, ನಮ್ಮ ಕೂಗು. ಇದು ಇಲ್ಲಿಗೆ ಮುಕ್ತಾಯವಾಗಲ್ಲ. ಹಂತ ಹಂತವಾಗಿ ಹೋರಾಟ ರೂಪಿಸುತ್ತೇವೆ ಎಂದು ಪಾಟೀಲ ತಿಳಿಸಿದರು.
ಶುಭ ಕೋರಿದ ಜನ: ಗದಗ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಐದು ದಿನ ಸಂಚರಿಸಿದ ಸಂಕಲ್ಪ ಯಾತ್ರೆಗೆ ಎಲ್ಲ ಕಡೆಗೂ ಉತ್ತಮ ಜನಸ್ಪಂದನೆ ಲಭಿಸಿತು. ಕೊನೆಯ ದಿನವಾದ ಭಾನುವಾರ ಬೆಳಗ್ಗೆ ಮುಧೋಳ ನಗರದಿಂದ ರ‍್ಯಾಲಿ ಪ್ರಾರಂಭವಾಯಿತು. ನಗರದಲ್ಲಿ ಪಟಾಕಿ ಸಿಡಿಸಿ, ಜೆಸಿಬಿ ಮೂಲಕ ಎಸ್.ಆರ್. ಪಾಟೀಲ ಅವರಿಗೆ ಹೂಮಳೆಗೈದ ಅಭಿಮಾನಿಗಳು, ಹೋರಾಟದ ಯಶಸ್ಸಿಗೆ ಶುಭಕೋರಿದರು.
ಡೊಳ್ಳು ಬಾರಿಸಿದ ಎಸ್ಸಾರ್ಪಿ: ಭಾನುವಾರ ಮುಧೋಳ ಮತ್ತು ಬೀಳಗಿ ತಾಲೂಕಿನಲ್ಲಿ ಸಾಗಿದ ಟ್ರ್ಯಾಕ್ಟರ್ ರ್ಯಾಲಿಗೆ ಅನೇಕ ಕಡೆಗಳಲ್ಲಿ ಜನರು ಸಹಕಾರ ನೀಡಿದರು. ಡೊಳ್ಳು ಕುಣಿತ, ಜಾಂಜ್ ಮೇಳದ ಮೂಲಕ ಸ್ವಾಗತಿಸುತ್ತಿದ್ದರು. ಈ ವೇಳೆ ಪಾಟೀಲ ಅವರೂ ಸಹ ಡೊಳ್ಳು ಬಾರಿಸಿ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದರು.
ಸರ್ಕಾರವೇ ನಮ್ಮ ರ್ಯಾಲಿಯನ್ನು ಸ್ವಾಗತಿಸಿದೆ. ಅಪಹಾಸ್ಯ ಮಾಡಿಲ್ಲ. ನಮ್ಮ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗಿದೆ ಎಂದು ಇದರಿಂದ ಅರ್ಥವಾಗುತ್ತದೆ. ಉತ್ತರದ ಜನರು ಅಸಮಾನತೆ, ಅಪಮಾನ ಸಾಕಷ್ಟು ಅನುಭವಿಸಿದ್ದಾರೆ. ಇದು ಇನ್ನು ಕೊನೆಯಾಗಬೇಕು. ಅಧಿಕಾರಕ್ಕೆ ಯಾವುದೇ ಪಕ್ಷ ಬಂದರೂ ಅವರ ಮೊದಲ ಆದ್ಯತೆ ಇನ್ನು ಮುಂದೆ ಉತ್ತರ ಕರ್ನಾಟಕ ಆಗಬೇಕು. | ಎಸ್.ಆರ್. ಪಾಟೀಲ ಅಧ್ಯಕ್ಷ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ
ಒಕ್ಕೋರಲ ಹಕ್ಕೊತ್ತಾಯ: ಉತ್ತರ ಕರ್ನಾಟಕದ ಜನರ ಬದುಕು ಹಸನಗೊಳಿಸುವ ಕೃಷ್ಣಾ, ಮಹದಾಯಿ, ನವಲಿ ಯೋಜನೆ ಪೂರ್ಣಗೊಳಿಸಿ ಎನ್ನುವ ಹಕ್ಕೊತ್ತಾಯದ ಜತೆಗೆ, ‘ಇನ್ನು ತಾಳ್ಮೆ ಪರೀಕ್ಷೆ ಬೇಡ’ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಸ್ವಾಭಿಮಾನ ವೇದಿಕೆ ಮುಖಾಂತರ ವಿವಿಧ ಮಠಾಧೀಶರು ಹಾಗೂ ಅನ್ನದಾತರು ಸರ್ಕಾರಕ್ಕೆ ರವಾನಿಸಿದರು. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬಾಪೂಜಿ ಅಂತಾರಾಷ್ಟ್ರೀಯ ಶಾಲೆ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಎಸ್.ಆರ್. ಪಾಟೀಲ ನೇತೃತ್ವದ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಸಂಕಲ್ಪ ಯಾತ್ರೆ ಸಮಾರೋಪದಲ್ಲಿ ಈ ಎಚ್ಚರಿಕೆ ಪ್ರತಿಧ್ವನಿಸಿತು.