

ಮಡಿಕೇರಿ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಾರ್ಚ್ ಅಂತ್ಯದೊಳಗೆ ಘನ ತ್ಯಾಜ್ಯ ನಿರ್ವಹಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ಜಿಪಂ ಸಿಇಒ ಕೆ.ಲಕ್ಷ್ಮೀಪ್ರಿಯ ತಿಳಿಸಿದರು.
ನಗರದ ಜಿಪಂ ನೂತನ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಪಂ ಹಾಗೂ ಹಸಿರು ದಳ, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಘನ ತ್ಯಾಜ್ಯ ನಿರ್ವಹಣೆ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆಯ ನಿರ್ವಹಣೆಗೆ ಎಲ್ಲ ಗ್ರಾಮ ಪಂಚಾಯಿತಿಗಳ ಸಂಪೂರ್ಣ ಸಹಕಾರ ಅಗತ್ಯವಾಗಿದ್ದು, ಮಾ.೩೦ರ ಒಳಗೆ ಸಮರ್ಪಕವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುವಂತಾಗಬೇಕು. ಗೋಣಿಕೊಪ್ಪ ಗ್ರಾಪಂ ಘನ ತ್ಯಾಜ್ಯ ಹಾಗೂ ಕಸ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳು ಮಾದರಿಯಾಗಿದ್ದು, ಇತರ ಗ್ರಾಪಂ ವ್ಯಾಪ್ತಿಯಲ್ಲಿ ಇದೇ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಿದಲ್ಲಿ ಕಸದ ಸಮಸ್ಯೆ ಇಲ್ಲದಂತಾಗುತ್ತದೆ ಎಂದು ಹೇಳಿದರು.
ಹಸಿರುದಳದ ಕಬೀರ್ ಅರೋರ, ಘನ ತ್ಯಾಜ್ಯ ನಿರ್ವಹಣೆ ಕಾಯ್ದೆ-ಉಪವಿಧಿಗಳು ಮತ್ತು ನಿಯಮಗಳು ಹಾಗೂ ಗ್ರಾಮ ಪಂಚಾಯಿತಿಗಳ ಯಶೋಗಾಥೆ ಕುರಿತು ಮಾಹಿತಿ ನೀಡಿದರು.
ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ರೌಂಡ್ ಟೇಬಲ್‌ನ ಡಾ.ಶಾಂತಿ ತುಮ್ಮಾಲ, ಪ್ಲಾಸ್ಟಿಕ್ ನಿಷೇಧ ಮತ್ತು ಶೂನ್ಯ ತ್ಯಾಜ್ಯ ಸಾಧನೆ-ಎಚ್.ಎಸ್.ಆರ್ ಯಶೋಗಾಥೆ ಮತ್ತು ‘ಗ್ರೀನ್ ದಿ ರೆಡ್’ ಕ್ಯಾಂಪೇನ್ ಕುರಿತು ತಿಳಿಸಿದರು. ವಾಸುಕಿ ಅಯ್ಯಂಗಾರ್ ಸರಳ ವಿಧಾನದಲ್ಲಿ ಹಸಿಕಸದಿಂದ ಗೊಬ್ಬರ ತಯಾರಿಕೆ ಮತ್ತು ಮಣ್ಣಿನ ಆರೋಗ್ಯದ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಾಗಾರದಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಜಿಲ್ಲಾ ಸಂಚಾಲಕ ಡಿ.ಡಿ.ಪೆಮ್ಮಯ್ಯ, ಜಿಪಂ ಅಧಿಕಾರಿಗಳು, ಜಿಲ್ಲೆಯ ವಿವಿಧ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಇದ್ದರು.