ಎಫ್​ಎಕ್ಯೂ ಸೂರ್ಯಕಾಂತಿ ಖರೀದಿಗೆ ಅವಧಿ ನಿಗದಿ

Deadline for purchasing FAQ sunflowers
Published on

ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ೂಷಿಸಿರುವ ಎಫ್​ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕ್ವಿಂಟಾಲ್​ಗೆ 7721 ರೂ. ಬೆಂಬಲ ಬೆಲೆಯಡಿ ಖರೀದಿಗೆ ರೈತರ ನೋಂದಣಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿ ನೋಂದಣಿ ಕಾರ್ಯದ ಜತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸೆ.26 ರಂದು ನಡೆದ ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಈ ರ್ನಿಣಯ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ ಸೂರ್ಯಕಾಂತಿ ಉತ್ಪನ್ನ ಖರೀದಿಗೆ ಜಿಲ್ಲೆಯ ಬಬಲೇಶ್ವರ, ಸವನಹಳ್ಳಿ, ಬೆಳ್ಳುಬ್ಬಿ, ತಾಜಪುರ, ವಿಜಯಪುರ, ತಂಗಡಗಿ, ಚಡಚಣ, ಹಲಸಂಗಿ, ಸಿಂದಗಿ, ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ಸೇರಿ ಒಟ್ಟು 11 ಖರೀದಿ ಕೇಂದ್ರ ತೆರೆಯಲಾಗಿದೆ. ನಾಫೆಡ್​ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಏಜೆನ್ಸಿಯಾಗಿ, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸಹಕಾರಿ ಎಣ್ಣೇಬಿಜ ಬೆಳೆಗಾರರ ಮಹಾಮಂಡಳ ನಿಯಮಿತ ಸಂಸ್ಥೆಯನ್ನು ರಾಜ್ಯಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.

ನಾಫೆಡ್​ ಸಂಸ್ಥೆಗಳ ಮೂಲಕ ಖರೀದಿ ಕೇಂದ್ರಗಳಲ್ಲಿ ನೋಂದಣಿಯೊಂದಿಗೆ ಖರೀದಿ ಪ್ರಾರಂಭಿಸುವಂತೆ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ.

ಖರೀದಿ ಕೇಂದ್ರಗಳಲ್ಲಿ ಪ್ರತಿ ರೈತರಿಂದ ಎಕರೆಗೆ ಗರಿಷ್ಠ 4 ಕ್ವಿಂಟಾಲ್​ನಂತೆ ಹಾಗೂ ಗರಿಷ್ಠ 20 ಕ್ವಿಂಟಾಲ್​ ಎಫ್​ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಸುವಂತೆ ಹಾಗೂ ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಯಂತೆ ಖರೀದಿಸಿದ ಉತ್ಪನ್ನದ ಮೌಲ್ಯವನ್ನು 3 ದಿನದೊಳಗೆ ರೈತರ ಹೆಸರಿನ ಆಧಾರ್​ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್​ ಖಾತೆಗೆ ಮಾತ್ರ ಉತ್ಪನ್ನ ಮೌಲ್ಯವು ಡಿಬಿಟಿ ಮೂಲಕ ಜಮೆ ಆಗುವಂತೆ ಪಾವತಿ ಮಾಡಬೇಕು. ಆವರ್ತನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ 5866 ಹೆಕ್ಟೇರ್​ ೇತ್ರದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದ್ದು, ಅಂದಾಜು 3662 ಕ್ವಿಂಟಾಲ್​ ಇಳುವರಿ ಬರಬಹುದೆಂದು ಅಂದಾಜಿಸಿರುವ ಕುರಿತು ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಆಲ್​ಗೆ 5,200 ರಿಂದ 6,000 ರವರೆಗಿನ ದರಕ್ಕೆ ಮಾರಾಟವಾಗುತ್ತಿರುವ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಹಕಾರ ಇಲಾಖೆ ಉಪನಿಬಂಧಕಿ ಭಾಗ್ಯಶ್ರೀ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ಗೋಠೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net