

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ಬಿಜೆಪಿ- 71ರ ಗ್ರಾಮೀಣ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಬುಧವಾರ ಕೊನೆಗೊಳಿಸಲಾಯಿತು.
ಸಂತ್ರಸ್ತ ರೈತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡದಿದ್ದರೆ ಮತ್ತೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮಂಗಳವಾರ ಭಜನಾ ಮಂಡಳಿಗಳೊ0ದಿಗೆ ಧರಣಿ ನಡೆಸಿದ್ದ ಪ್ರತಿಭಟನಾಕಾರರು, ಬುಧವಾರ ಎತ್ತು, ಚಕ್ಕಡಿಗಳೊಂದಿಗೆ ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು. ಮನವಿ ನೀಡಲು ಜಿಲ್ಲಾಧಿಕಾರಿ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜಿಲ್ಲಾಽಕಾರಿ ಬೆಳೆ ಹಾನಿ ಪರಿಶೀಲನೆಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ ನಂತರ ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಧರಣಿಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳ ಬೆನ್ನು ಬಿದ್ದಿದೆ. ಅತಿಯಾದ ಮಳೆಯಿಂದ ಹೆಸರು, ಉದ್ದು, ಸೋಯಾಬಿನ್, ಹತ್ತಿ, ಇತರ ಬೆಳೆಗಳು ಹಾಳಾಗಿವೆ. ರೈತರು ರೋಟಾವೇಟರ್ ಹೊಡೆಸಿದ ನಂತರ ಅಽಕಾರಿಗಳು ಮತ್ತು ಜನಪ್ರತಿನಿಧಿಗಳು ಬೆಳೆ ಸಮೀಕ್ಷೆಗೆ ಹೋಗಿದ್ದಾರೆ. ಸಂತ್ರಸ್ತ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಸಂಪೂರ್ಣ ಹಾನಿಗೀಡಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಕೊಡಬೇಕು. ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದರು.
ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ ಮಾತನಾಡಿ, ಅತಿವೃಷ್ಟಿಯಿಂದ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತರಿಗೆ, ಸರ್ಕಾರ ಮಲತಾಯಿ ಧೊರಣೆ ಅನುಸರಿಸುತ್ತಿದೆ. ಕೇವಲ ಪ್ರಚಾರಕ್ಕೋಸ್ಕರ ಕೃಷಿ ಮೇಳ ಅಯೋಜಿಸಿ ಹೆಸರು ಮಾಡಲು ಬಯಸುತ್ತಿರುವುದು ವಿಪರ್ಯಾಸ ಎಂದರು.
ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ಗಂಗಾಧರ ಪಾಟೀಲ ಕುಲಕರ್ಣಿ, ಸವಿತಾ ಅಮರಶೆಟ್ಟಿ, ಶಶಿ ಕುಲಕರ್ಣಿ, ಶಂಕರ ಕೋಮಾರದೇಸಾಯಿ, ಶಂಕರ ಶೆಳಕೆ, ಬಸು ಬಾಳಗಿ, ಬಸವರಾಜ ಕುಂದಗೋಳಮಠ, ನಿಂಗಪ್ಪ ಸುತಗಟ್ಟಿ, ಮೋಹನ ರಾಮದುರ್ಗ, ಮಂಜುನಾಥ ನಡಟ್ಟಿ, ಮಹಾದೇವಪ್ಪ ದಂಡಿನ, ಈಶ್ವರಗೌಡ ಪಾಟೀಲ, ರಾಕೇಶ ನಾಝರೆ, ಬಸವರಾಜ ಪಳ್ಳೊಟಿ, ನಿಜನಗೌಡ ಪಾಟೀಲ, ಗುರುನಾಥಗೌಡ ಗೌಡರ, ಅನಿತಾ ಚಳಗೇರಿ, ರತ್ನಾ ನಾಝರೆ, ಶ್ರುತಿ ಬೆಳ್ಳಕ್ಕಿ, ರೇಣುಕಾ ಲಿಂಬರದೇವರಮಠ, ಇತರರಿದ್ದರು.