ವೀರಶೈವ ಮಹಾಸಭಾ ಸದಸ್ಯತ್ವ ಪಡೆಯಲು ಗಡುವು

Vijayavani-logo
Published on

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ವಿವಿಧ ಘಟಕಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೇ 20ರೊಳಗೆ ಸದಸ್ಯತ್ವ ಪಡೆದುಕೊಳ್ಳುವಂತೆ ಮಹಾಸಭಾ ತನ್ನ ಸಮಾಜ ಬಾಂಧವರಿಗೆ ಮನವಿ ಮಾಡಿದೆ.

ಮುಂಬರುವ ಜುಲೈ ತಿಂಗಳಲ್ಲಿ 3 ಹಂತದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತವು ಗ್ರಾಮ ಪಂಚಾಯತಿ, ನಗರಸಭೆ, ಪುರಸಭೆ, ವಿಧಾನಸಭಾ, ಮಹಾನಗರ ಪಾಲಿಕೆ, ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಆಗಸ್ಟ್‌ನಲ್ಲಿ 2ನೇ ಹಂತದ ಚುನಾವಣೆ ರಾಜ್ಯ ಘಟಕಗಳು ಹಾಗೂ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಮತ್ತು ಸೆಪ್ಟಂಬರ್‌ನಲ್ಲಿ 3ನೇ ಹಂತದಲ್ಲಿ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿವೆ. ಈ ಮೂರೂ ಹಂತದ ಚುನಾವಣಾ ವೇಳಾಪಟ್ಟಿಯನ್ನು ಮೇ ತಿಂಗಳಿನಲ್ಲಿ ಪ್ರಕಟಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಇನ್ನೂ ಸದಸ್ಯರಾಗದ ಸಮಾಜ ಬಾಂಧವರು ಮೇ 20ರೊಳಗೆ ಸದಸ್ಯತ್ವ ಪಡೆದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅವಕಾಶ ಸಿಗಲಿದೆ. ಗಡುವಿನ ನಂತರ ಸದಸ್ಯತ್ವ ನೀಡಲಾಗುವುದಿಲ್ಲ. ಹಾಗಾಗಿ ಮೇ 20ರೊಳಗೆ ಸದಸ್ಯತ್ವದ ಅರ್ಜಿ ನಮೂನೆ ಮತ್ತು ಶುಲ್ಕವನ್ನು ಮಹಾಸಭೆಯ ಕೇಂದ್ರ ಕಚೇರಿಗೆ ತಲುಪಿಸಬೇಕಾಗುತ್ತದೆ. ಅರ್ಜಿ ನಮೂನೆಯನ್ನು ಮಹಾಸಭಾ ಕೇಂದ್ರ ಕಚೇರಿ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಬಳಿ ದೊರೆಯಲಿವೆ ಎಂದು ಮಹಾಸಭೆಯ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net