ಬಾಕಿ ಕಡತ ವಿಲೇವಾರಿಗೆ ಗಡುವು

HYR UDGATANE
Published on

ಹಿರಿಯೂರು: ಜನಸ್ನೇಹಿ-ಸರ್ವ ಸ್ಪರ್ಶಿ ಆಡಳತದ ಸಂಕಲ್ಪ, ಜನ ಸಾಮಾನ್ಯರ ಮನೆ ಬಳಿಗೆ ಆಡಳಿತ, ಸರ್ಕಾರದ ಸೌಲಭ್ಯ ವಿತರಣೆಗೆ ಜನತಾ ದರ್ಶನ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ನಗರದ ತಾಹಾ ಪ್ಯಾಲೇಸ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನುಡಿದಂತೆ ನಡೆಯುವುದು ಸರ್ಕಾರದ ಬದ್ಧತೆ. ಪಂಚ ಗ್ಯಾರಂಟಿ ಯೋಜನೆಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರದ ಸೌಲಭ್ಯ, ಆಡಳಿತ ಜನರ ಬಳಿಗೆ ಬರುವ ವಿನೂತನ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು. ಈ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳ ಬದ್ಧತೆ ಅಗತ್ಯ ಎಂದರು.

ಜಿಲ್ಲೆಯಲ್ಲಿ 6500 ಪೌತಿ ಖಾತಿ ಬಾಕಿ ಇದ್ದು, ಒಂದು ತಿಂಗಳಲ್ಲಿ ಕಡತ ವಿಲೇವಾರಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯ ಕೆಲವೆಡೆ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು, ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು, ಹಳ್ಳಿಗಳಿಗೆ ಭೇಟಿ ನೀಡಿ, ಜನ-ಜಾನುವಾರುಗಳ ಕುಡಿವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಬರ, ಬೆಳೆ ನಷ್ಟ ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ರೈತರ ಹಿತ ಕಾಯಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಸರ್ಕಾರದ ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಬೇಕು. ಸಕಾಲಕ್ಕೆ ಸರ್ಕಾರದ ಸೇವೆ, ಸೌಲಭ್ಯವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಬದ್ಧತೆ ಪ್ರದರ್ಶಿಸಬೇಕು. 15 ದಿನಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಜನಸ್ಪಂದನೆ ಕಾರ್ಯಕ್ರಮ ಆಯೋಜಿಸಿ, ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಜಿಪಂ ಸಿಇಒ ಸೋಮಶೇಖರ್ ಮಾತನಾಡಿ, ರೈತರು, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಜನತಾ ದರ್ಶನ ಉತ್ತಮ ಕಾರ್ಯಕ್ರಮ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ ಎಂದರು.

ತಾಲೂಕಿನ ಸರ್ಕಾರಿ ಶಾಲೆಗಳ 11998 ಮಕ್ಕಳಿಗೆ ಸಮವಸ್ತ್ರ, ಶೂ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಆದೇಶ ಪತ್ರ, ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಆಯುಷ್ಮಾನ್ ಹೆಲ್ತ್ ಕಾರ್ಡ್, ಕೃಷಿ ಪರಿಕರ ವಿತರಿಸಲಾಯಿತು.

ಜನತಾ ದರ್ಶನದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಆಸೆಯೊಂದಿಗೆ ನೂರಾರು ರೈತರು, ಮಹಿಳೆಯರು, ಅಂಗವಿಕಲರು ಆಗಮಿಸಿದ್ದರು. ಸಚಿವರಿಗೆ ಅರ್ಜಿ ಕೊಡಲು ವೇದಿಗೆ ಬಳಿ ನಿಂತಿದ್ದ ವೃದ್ಧರು, ವೇದಿಕೆ ಕಾರ್ಯಕ್ರಮ ಮುಗಿದ ತಕ್ಷಣ ಸರತಿ ಸಾಲಿನಲ್ಲಿ ನಿಂತು ಸಚಿವರು-ಡಿಸಿ ಬಳಿ ತಮ್ಮ ಸಮಸ್ಯೆ ಪರಿಹರಿಸುವಂತೆ ಕೋರಿದರು. ಜಮೀನಿಗೆ ಸಂಬಂದಿಸಿದ ವ್ಯಾಜ್ಯಗಳ ಪರಿಹಾರಕ್ಕೆ ಹೆಚ್ಚು ಅರ್ಜಿ ಸಲ್ಲಿಕೆಯಾದವು, ಶಾಲಾ ಕೊಠಡಿ ದುರಸ್ತಿ, ಚರಂಡಿ, ರಸ್ತೆ, ಪಿಂಚಣಿಗಾಗಿ ಅರ್ಜಿ ಸಲ್ಲಿಸಿದರು.

ಕೃಷಿ ಪರಿಕರಗಳ ವಸ್ತು ಪ್ರದರ್ಶನ-ವಿವಿಧ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು. ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಕಾರ್ತಿಕ್, ಡಿಡಿಪಿಐ ರವಿಶಂಕರ ರೆಡ್ಡಿ, ತಹಸೀಲ್ದಾರ್ ರಾಜೇಶ್ ಕುಮಾರ್, ಡಿಎಚ್‌ಒ ಡಾ.ರಂಗನಾಥ್, ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ತಾಪಂ ಇಒ ಶಿವಪ್ರಕಾಶ್, ಕಂದಾಯ ಅಧಿಕಾರಿ ಎನ್.ವರದರಾಜ್, ತಿಪ್ಪೇಸ್ವಾಮಿ, ಮೂಯರವರ್ಮ, ಸ್ವಾಮಿ, ಡಾ.ವೆಂಕಟೇಶ್, ತೋಟಗಾರಿಕೆ ಇಲಾಖೆ ಡಿಡಿ ಡಾ. ಜಿ.ಸವಿತಾ, ಲೋಕೇಶ್, ಗೋವಿಂದರಾಜ್, ಬೆಸ್ಕಾಂ ಎಇಇ ಪೀರ್‌ಸಾಬ್, ನಗರಸಭೆ ಪೌರಾಯುಕ್ತ ಮಹಂತೇಶ್, ಬಿಇಒ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net