ಬಿವಿಕೆ ಅಯ್ಯಂಗಾರ್ ರಸ್ತೆ ಕಾಮಗಾರಿ ಪೂರ್ಣಕ್ಕೆ ಗಡುವು

commsr visit
Published on

ಬೆಂಗಳೂರು: ಮಹಾನಗರದ ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾಗಿರುವ ಬಿವಿಕೆ ಅಯ್ಯಂಗರ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಬಿಬಿಎಂಪಿ ಪಶ್ವಿಮ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ಶುಕ್ರವಾರ ಮಾತನಾಡಿದ ಅವರು, ಚಿಕ್ಕಪೇಟೆ ಜಂಕ್ಷನ್‌ನಿಂದ ಸುಲ್ತಾನ್‌ಪೇಟೆ ಜಂಕ್ಷನ್ ವರೆಗಿನ 190 ಮೀ. ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್‌ಗೆ ಮಾರ್ಪಡಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಬದಿಯಲ್ಲಿ ಕಾಂಕ್ರೀಟ್ ಹಾಕಿ ಕ್ಯೂರಿಂಗ್ ಮಾಡಲಾಗುತ್ತಿದೆ. ಹಾಗಾಗಿ ಈ ತಿಂಗಳ 15ರೊಳಗಾಗಿ ಬಾಕಿ ಕೆಲಸ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಮೆಜೆಸ್ಟಿಕ್‌ನಲ್ಲಿ 350 ಮೀಟರ್ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ. ರಸ್ತೆಯ ಅರ್ಧ ಭಾಗಗಕ್ಕೆ ಈಗಾಗಲೇ ವೈಟ್ ಟಾಪಿಂಗ್ ಮಾಡಿದ್ದು, ಇನ್ನೂ ಅರ್ಧ ಭಾಗವನ್ನು ಬೇಗನೆ ಪೂರ್ಣಗೊಳಿಸಿ ಈ ತಿಂಗಳಾಂತ್ಯದೊಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳುವಂತೆ ತುಷಾರ್ ಗಿರಿನಾಥ್ ತಾಕೀತು ಮಾಡಿದರು.

ಬಿನ್ನಿಮಿಲ್ ರಸ್ತೆಯ ಕಾಮಗಾರಿ ಪರಿಶೀಲನೆ:

ಬಿನ್ನಿಮಿಲ್ ರಸ್ತೆಯ 220 ಮೀ. ಉದ್ದದ ರಸ್ತೆಗೆ 1 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಇದರಲ್ಲಿ ಪಾದಚಾರಿ ಮಾರ್ಗ, ಬೀದಿ ದೀಪ, ಡಕ್ಟ್ ಅಳವಡಿಕೆ ಕಾರ್ಯವನ್ನು ಪರಿಶೀಲಿಸಿ ರಸ್ತೆಯಲ್ಲಿ ನೀರು ನಿಲ್ಲದಂತೆ ಮಳೆನೀರು ಚರಂಡಿಗಳಿಗೆ ಸರಾಗವಾಗಿ ಹರಿದುಹೋಗುವಂತೆ ಗ್ರೇಟಿಂಗ್ಸ್‌ಗಳ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು.

ಗೂಡ್ಸ್ ಶೆಡ್ ರಸ್ತೆಯಲ್ಲಿ ನಿರ್ಗತಿಕರ ರಾತ್ರಿ ವಸತಿರಹಿತ ತಂಗುದಾಣದಲ್ಲಿ 30 ನಿರಾಶ್ರಿತರು ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಸತಿ ಇಲ್ಲದ ನಿರಾಶ್ರಿತರನ್ನು ಹುಡುಕಿ ಇಲ್ಲಿ ಆಶ್ರಯ ನೀಡಲು ಅಧಿಕಾರಿಗಳಿಗೆ ಹೇಳಿದರು.

ಇದೇ ವೇಳೆ ಅಷ್ಟಪಥ ಕಾರಿಡಾರ್‌ನ ಬಾಕಿ ಉಳಿದಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಬಾಕಿ ಕಾಮಗಾರಿ ಸಂಬಂಧ ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸ್ಥಳಪರಿಶೀಲನೆ ವೇಳೆ ಪಶ್ಚಿಮ ವಲಯದ ಜಂಟಿ ಆಯುಕ್ತ ಸಂಗಪ್ಪ, ಉಪ ಆಯುಕ್ತ ಶ್ರೀನಿವಾಸ್, ಮುಖ್ಯ ಅಭಿಯಂತರರಾದ ಶಶಿ ಕುಮಾರ್, ಲೋಕೇಶ್ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣ:

ಚಾಮರಾಜಪೇಟೆ ಮತಕ್ಷೇತ್ರಕ್ಕೆ ಸೇರಿ ಜಗಜೀವರಾಂನಗರ ಜನರಲ್ ಆಸ್ಪತ್ರೆಯ ಆವರಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಜನರಲ್ ಹಾಗೂ ಹೆರಿಗೆ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುತ್ತಿದೆ. ಇಲ್ಲಿ 100 ಹಾಸಿಗೆಗಳ ವ್ಯವಸ್ಥೆಯಿರಲಿದ್ದು, ಕಟ್ಟಡದ ಕಾಮಗಾರಿಗೆ ವೇಗ ನೀಡಿ ಬೇಗನೆ ಪೂರ್ಣಗೊಳಿಸಬೇಕು. ಈ ಆಸ್ಪತ್ರೆಯಲ್ಲಿ ಜನರಲ್ ಹಾಗೂ ಹೆರಿಗೆಗಾಗಿ ತಲಾ 30 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ವೈದ್ಯರ ಅವಶ್ಯಕತೆ ಇದ್ದಲ್ಲಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net