

ಕೋಲಾರ: ಕೆರೆಗಳ ಒತ್ತುವರಿ ತೆರವು ಕಾರ್ಯವನ್ನು ಮೇ 15ರೊಳಗೆ ಮುಗಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತ ಸಭೆಯಲ್ಲಿ ಮಾತನಾಡಿ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕಾರ್ಯನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ಅಭಿವೃದ್ಧಿ ಮತ್ತು ಜೀಣೋರ್ದ್ಧಾರಕ್ಕೆ ಸಂಬಂಧಪಟ್ಟ ಇಲಾಖೆಗಳು, ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ಸೂಚಿಸಿದರು.
ಕೆರೆಗಳ ಸಂರಕ್ಷಣೆ ಮತ್ತು ಜೀಣೋರ್ದ್ಧಾರಕ್ಕೆ ಪ್ರಾಥಮಿಕ ಕೆಲಸವೆಂದರೆ ಸಮೀಕ್ಷೆ ಮತ್ತು ಕೆರೆ ಪ್ರದೇಶದ ಗಡಿ ಗುರುತಿಸುವುದು. ಕೆರೆ ಪ್ರದೇಶದಲ್ಲಿ ಯಾವುದೇ ಒತ್ತುವರಿಗಳು ಆಗದಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಒತ್ತುವರಿಯಾಗಿದ್ದರೆ ತಕ್ಷಣ ತೆರವುಗೊಳಿಸಬೇಕು. ತೀವ್ರ ನೀರಿನ ಕೊರತೆ ನೀಗಿಸಲು ನೀರಿನ ಲಭ್ಯತೆಗಾಗಿ ಕೆರೆಗಳ ಸಂರಕ್ಷಣೆ ಆಗಬೇಕು ಎಂದರು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ 11,001 ಎಕರೆ 6 ಗುಂಟೆ ವಿಸ್ತೀರ್ಣದ 617, ಮಾಲೂರು ತಾಲೂಕಿನಲ್ಲಿ 8,739 ಎಕರೆ 39 ಗುಂಟೆ ವ್ಯಾಪ್ತಿಯ 541 ಕೆರೆಗಳು, ಕೋಲಾರ ತಾಲೂಕಿನಲ್ಲಿ 19,973 ಎಕರೆ 14 ಗುಂಟೆ ವಿಸ್ತೀರ್ಣದ 566 ಕೆರೆಗಳು, ಬಂಗಾರಪೇಟೆ ತಾಲೂಕಿನಲ್ಲಿ 4,785 ಎಕರೆ 30 ಗುಂಟೆ ವಿಸ್ತೀರ್ಣದ 387 ಕೆರೆಗಳು, ಕೆಜಿಎಫ್ ತಾಲೂಕಿನಲ್ಲಿ 7,435 ಎಕರೆ 18 ಗುಂಟೆ ವಿಸ್ತೀರ್ಣದ 318 ಕೆರೆಗಳು ಹಾಗೂ ಮುಳಬಾಗಿಲು ತಾಲೂಕಿನಲ್ಲಿ 17,261 ಎಕರೆ 5 ಗುಂಟೆ ವಿಸ್ತೀರ್ಣದ 803 ಕೆರೆಗಳ ಸರ್ವೇ ಮಾಡಲಾಗಿದೆ ಎಂದರು.
ಒಟ್ಟು 3,232 ಕೆರೆಗಳ ಸರ್ವೇ ಮಾಡಿ ಒತ್ತುವರಿಯಾಗಿದ್ದ 7,5194 ಎಕರೆ 112 ಗುಂಟೆ ವಿಸ್ತೀರ್ಣ ರಕ್ಷಣೆ ಮಾಡಲಾಗಿದೆ. ಎರಡು ತಿಂಗಳ ಅವಧಿಯಲ್ಲಿ 5,939 ಎಕರೆ 122 ಗುಂಟೆ ವಿಸ್ತೀರ್ಣದ 402 ಕೆರೆಗಳನ್ನು ಅಳತೆ ಮಾಡಲಾಗಿದ್ದು, ಅವುಗಳಲ್ಲಿ 815 ಎಕರೆ 120 ಗುಂಟೆ ವಿಸ್ತೀರ್ಣದ 344 ಕೆರೆಗಳಲ್ಲಿ ಅನಧಿಕೃತ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ತೆರವು ಕಾರ್ಯಚರಣೆ ಸಮಯದಲ್ಲಿ ಯಾವುದೇ ರೀತಿ ಅಡೆತಡೆಗಳು ಆಗದಂತೆ ಪೊಲೀಸ್ ಬಂದೊಬಸ್ತ್ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ. ನಿಖಿಲ್, ಉಪವಿಭಾಗಧಿಕಾರಿ ಡಾ.ಮೈತ್ರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ಭೂಮಾಪನ ಇಲಾಖೆಯ ಉಪ ನಿರ್ದೇಶಕ ಸಂಜಯ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ ಇದ್ದರು.