ಕೆರೂರ ಡಬ್ಬಾ ಅಂಗಡಿಗಳ ತೆರವಿಗೆ ಗಡುವು

Deadline for Clearance of Kerura Dabba Shops
ಕೆರೂರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕ ಅಕ್ರಮವಾಗಿ ಇಟ್ಟುಕೊಂಡಿರುವ ಡಬ್ಬಾ ಅಂಗಡಿ ತೆರವು ಕಾರ್ಯಾಚರಣೆ ನಡೆಸಿರುವುದು.
Published on

ಕೆರೂರ: ಪಟ್ಟಣದ ಬಾದಾಮಿ ಕ್ರಾಸ್‌ದಿಂದ ಹುಲಮನಿ ಪೆಟ್ರೋಲ್ ಬಂಕ್‌ವರೆಗಿನ ಹುಬ್ಬಳ್ಳಿ-ಸೊಲ್ಲಾಪುರ 218ರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಡಬ್ಬಾ ಅಂಗಡಿಗಳ ತೆರವಿಗೆ ಶನಿವಾರ ಪ್ರಾಧಿಕಾರದ ಅಧಿಕಾರಿಗಳು ಮುಂದಾದ ಹಿನ್ನೆಲೆ ಅಂಗಡಿ ಮಾಲೀಕರ ತೀವ್ರ ವಿರೋಧ ವ್ಯಕ್ತಪಡಿಸಿದರು.

ಪಟ್ಟಣದ ಹೆದ್ದಾರಿಯ ಎರಡೂ ಬದಿಗಳಲ್ಲಿ, ಡ್ರೈನೇಜ್ ಮೇಲೆ ಅಕ್ರಮವಾಗಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ವಾರದ ಸಂತೆ ದಿನದಂದು ಬೈಕ್, ತಳ್ಳುಗಾಡಿಗಳ ವಹಿವಾಟು ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಈ ಕಾರ್ಯಾಚರಣೆಗೆ ಕೆಲವರು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು.

ಮೊದಲು ನಿಮ್ಮ ಪಟ್ಟಣ ಪಂಚಾಯಿತಿ ಆಸ್ತಿಯಲ್ಲಿರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಆಮೇಲೆ ನಾವು ತೆರವು ಮಾಡುತ್ತೇವೆ ಎಂದು ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

ಹಬ್ಬದ ಬಳಿಕ ತೆರವು

ರಾಷ್ಟ್ರೀಯ ಹೆದ್ದಾರಿ ನರಗುಂದ ಉಪವಿಭಾಗದ ಇಂಜಿನಿಯರ್ ಮಾತನಾಡಿ, ನಾವು ನಿಮ್ಮ ವ್ಯಾಪಾರಕ್ಕೆ ಯಾವುದೇ ತೊಂದರೆ ಮಾಡಲ್ಲ, ನೀವು ರಸ್ತೆ ಬದಿಯಲ್ಲಿ ಹಾಗೂ ಡ್ರೈನೇಜ್ ಮೇಲೆ ಅಂಗಡಿಗಳನ್ನು ಇಟ್ಟು ಕೊಂಡಿದ್ದರಿಂದಾಗಿ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಅಘಾತಗಳೂ ಹೆಚ್ಚುತ್ತಿವೆ. ಆದ್ದರಿಂದ ಕೂಡಲೇ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

ಅಂದಾಜು ಎರಡ್ಮೂರು ವರ್ಷಗಳಿಂದ ರಸ್ತೆ ಬದಿಯ ಡ್ರೈನೇಜ್ ಕಾಮಗಾರಿಯನ್ನು ಹೆದ್ದಾರಿ ಎಡ ಹಾಗೂ ಬಲ ಬದಿಯ ಎಲ್ಲೆಂದರಲ್ಲಿ ಅರ್ಧಕ್ಕೆ ನಿಲ್ಲಿಸಿದ್ದಿರಿ, ಗಟಾರಗಳ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದೆಯಲ್ಲದೆ, ಗಬ್ಬೆದ್ದು ನಾರುತ್ತಿವೆ. ಇದರಿಂದ ಕ್ರಿಮಿ ಕೀಟಗಳು ಹೆಚ್ಚಾಗಿ ಸಾರ್ವಜನಿಕರಿಗೆ ಅನಾರೋಗ್ಯ ಉಂಟಾಗುತ್ತಿದೆ ಎಂದು ಪಪಂ ಸದಸ್ಯ ಕುಮಾರ ಐಹೊಳಿ ಹೇಳಿದಾಗ, ಇದಕ್ಕೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್, ಕಾಮಾಗಾರಿ ಏಕೆ ವಿಳಂಬವಾಗಿದೆ ಎಂದು ವರದಿ ತರಿಸಿಕೊಂಡು ನೋಡುತ್ತೇನೆ ಎಂದು ತಿಳಿಸಿದರು.

ಡಬ್ಬಾ ಅಂಗಡಿಗಳ ತೆರವಿಗೆ ಹಬ್ಬದವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಜೆಸಿಬಿಯಿಂದ ತೆರವುಗೊಳಿಸಲಾಗುವುದು.
ಸಂತೋಷ ಕೋಟಿ, ರಾಷ್ಟ್ರೀಯ ಹೆದ್ದಾರಿ ನರಗುಂದ ಉಪವಿಭಾಗದ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net