

ಮುದ್ದೇಬಿಹಾಳ: ಪಟ್ಟಣದ ಹಳೇ ಕಾಯಿಪಲ್ಲೆ ಮಾರುಕಟ್ಟೆ ಶಿಥಿಲಗೊಂಡಿದ್ದು ಜಿಲ್ಲಾಧಿಕಾರಿ ಆದೇಶದನ್ವಯ ಅದನ್ನು ತೆರವುಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಳಿಗೆ ಬಾಡಿಗೆ ಪಡೆದಿರುವ ಅಂಗಡಿಗಳನ್ನು ಖಾಲಿ ಮಾಡುವಂತೆ ಪುರಸಭೆ ಅಧಿಕಾರಿಗಳು ಬುಧವಾರ ಅಂತಿಮ ನೋಟಿಸ್ ಅಂಟಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಕೆ.ಎಂ. ಖಿಲಾರಿ ಸಮ್ಮುಖದಲ್ಲಿ ಸಿಬ್ಬಂದಿ ಅಂಗಡಿಗಳಿಗೆ ನೋಟಿಸ್ ಅಂಟಿಸಿದ್ದಾರೆ. ನೋಟಿಸ್‌ನಲ್ಲಿ 2011ರಲ್ಲಿ ನೋಟಿಸ್, 2017ರ ಮೇ 19 ರಂದು ನೋಟಿಸ್, 2020ರ ಅ.28 ರಂದು ನೋಟಿಸ್, 2021ರ ನ.17 ರಂದು ಅಂತಿಮವಾಗಿ ಮಳಿಗೆ ಖಾಲಿ ಮಾಡಲು ನೋಟಿಸ್ ಜಾರಿ ಮಾಡಲಾಗಿದೆ. ಇದಲ್ಲದೇ 2021 ರಲ್ಲೇ ಲೋಕೋಪಯೋಗಿ ಇಲಾಖೆಯಿಂದ ಮಳಿಗೆಗಳು ಶಿಥಿಲಗೊಂಡಿದ್ದು ನೆಲಸಮ ಮಾಡುವಂತೆ ವರದಿ ನೀಡಲಾಗಿದೆ.
ಕಬ್ಬಿಣದ ಸರಳುಗಳು ಹೊರಗೆ ಬಿದ್ದಿದ್ದು ಕಾಂಕ್ರಿಟ್ ಆಗೀಗ ಕಳಚಿ ಬೀಳುತ್ತಿರುತ್ತದೆ. ಮಾರುಕಟ್ಟೆ ನಡೆಸಲು ಯೋಗ್ಯವಿಲ್ಲವೆಂದು ಕಟ್ಟಡವನ್ನು ಶೀಘ್ರವಾಗಿ ನೆಲಸಮ ಮಾಡಲು ವರದಿ ನೀಡಿದ್ದು ಜಿಲ್ಲಾಧಿಕಾರಿ ಅವರು ನ. 30, 2011 ರಂದೇ ಮಾರುಕಟ್ಟೆ ನೆಲಸಮ ಮಾಡಲು ಆದೇಶಿಸಿದ್ದಾರೆ.
ಮಾರುಕಟ್ಟೆ ಖಾಲಿ ಮಾಡಲು ಅಂತಿಮ ನೋಟಿಸ್‌ನ್ನು ಅಂಗಡಿಕಾರರಿಗೆ ಜಾರಿ ಮಾಡಲಾಗಿದೆ. ಖಾಲಿ ಮಾಡಲು ಅಂಗಡಿಕಾರರು ಕೇಳಿದ್ದ ಎರಡು ತಿಂಗಳ ಸಮಯವೂ ಮುಗಿದಿದೆ. ಶಿಥಿಲಗೊಂಡ ಅಂಗಡಿಗಳನ್ನು ನೆಲಸಮ ಮಾಡಲು ಟೆಂಡರ್ ಮಾಡಲಾಗಿದ್ದು ಮೂರು ದಿನದಲ್ಲಿ ಅಂಗಡಿಯಲ್ಲಿರುವ ಸಾಮಗ್ರಿ ತೆರವುಗೊಳಿಸಿಕೊಳ್ಳುವಂತೆ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಜೆಇ ಭೀಮನಗೌಡ ಬಗಲಿ, ಸಿಬ್ಬಂದಿ ಶಮ್ಸುದ್ದೀನ ಮೂಲಿಮನಿ ಮೊದಲಾದವರು ಇದ್ದರು.
ಇಷ್ಟೆಲ್ಲ ಕಾನೂನು ಪ್ರಕ್ರಿಯೆ ಜರುಗಿದ್ದರೂ ಮಾರುಕಟ್ಟೆಯಲ್ಲಿನ ಅಂಗಡಿಕಾರರು ಮಾತ್ರ ತಾವು ಮಳಿಗೆಗಳನ್ನು ಖಾಲಿ ಮಾಡುವ ಇಚ್ಛಾಶಕ್ತಿ ತೋರುತ್ತಿಲ್ಲ. ಜೀವ ಭಯ ಇದ್ದರೂ ಅದಕ್ಕೆ ಕ್ಯಾರೆ ಎನ್ನದೇ ವ್ಯಾಪಾರ ಮುಂದುವರಿಸಿದ್ದಾರೆ. ಅಲ್ಲದೆ ರಾಜಕೀಯ ಪ್ರಭಾವ ಬಳಸಿ ಶಿಥಿಲ ಮಾರುಕಟ್ಟೆ ನೆಲಸಮ ಮಾಡಲು ಬಿಡುತ್ತಿಲ್ಲ ಎಂಬ ಆರೋಪಗಳು ಇವೆ. ಒಂದು ವೇಳೆ ಮಾರುಕಟ್ಟೆ ಕುಸಿದರೆ ಭಾರಿ ಪ್ರಮಾಣದ ಜೀವಹಾನಿ ಸಂಭವಿಸುವುದಂತೂ ಗ್ಯಾರಂಟಿ ಎನ್ನುತ್ತಿವೆ ಪುರಸಭೆ ಮೂಲಗಳು.