‘ಮೃತ ವ್ಯಕ್ತಿ’ ಜೀವಂತ ಪತ್ತೆ! ಕೆರೆಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಯಾರೆಂಬುದು ನಿಗೂಢ

Dead body
Published on

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆಯಾಗಿ ಅಂತ್ಯಸಂಸ್ಕಾರ ವಿಧಿಗಳನ್ನು ನೆರವೇರಿಸಿ, ಉತ್ತರಕ್ರಿಯೆಗೆ ಮನೆಮಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ, ಮೃತರೆಂದು ನಂಬಿದ್ದ ವ್ಯಕ್ತಿ ಊರಿಗೆ ಮರಳಿದ್ದಾರೆ.

ವಿಚಿತ್ರವಾದರೂ, ಇದು ಸತ್ಯ!

ಘಟನೆ ನಡೆದಿರುವುದು ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ. ಶ್ರೀನಿವಾಸ ದೇವಾಡಿಗ (60) ಜ.26ರಂದು ಕಾಣೆಯಾಗಿದ್ದರು. ಅವರ ಮಕ್ಕಳ ದೂರಿನನ್ವಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಒಂದು ವಾರ ಬಳಿಕ (ಫೆ.3) ಓಡಿಲ್ನಾಳ ಗ್ರಾಮದ ಕುಲ್ಲುಂಜ ಕೆರೆಯಲ್ಲಿ ಗುರುತು ಸಿಗದಷ್ಟು ಕೊಳೆತಿದ್ದ ಶವ ತೇಲುತ್ತಿರುವುದು ಪತ್ತೆಯಾಗಿತ್ತು. ಇದು ಶ್ರೀನಿವಾಸರ ಮೃತದೇಹವೆಂದು ಕುಟುಂಬದವರು ಅಂತ್ಯಸಂಸ್ಕಾರ ನಡೆಸಿದ್ದರು.

ಮನೆಯವರು ಉತ್ತರಕ್ರಿಯೆಗೆ ಸಿದ್ಧತೆಗಳನ್ನು ನಡೆಸುತ್ತಿರುವಾಗ, ಶ್ರೀನಿವಾಸ ಅವರು ಜೀವಂತವಾಗಿರುವ ಸುದ್ದಿ ಬಂತು. ಮಂಗಳೂರಿನ ರಸ್ತೆ ಬದಿಯಲ್ಲಿ ಇರುವ ಬಗ್ಗೆ ಯಾರೋ ಮಾಹಿತಿ ನೀಡಿದ್ದರು. ಅವರನ್ನು ಕರೆಸಿದ ಬಳಿಕ ನಾಪತ್ತೆ ಪ್ರಕರಣ ಮುಕ್ತಾಯಗೊಂಡಿತು.

ಎಲ್ಲೆಂದರಲ್ಲಿ ತಿರುಗಾಟ: ಮದ್ಯಪಾನ ಚಟ ಅಂಟಿಸಿಕೊಂಡಿದ್ದ ಶ್ರೀನಿವಾಸ ಸಹೋದರನ ಮನೆಯಲ್ಲಿದ್ದರು. ಪತ್ನಿ ಮನೆ ಮಂಗಳೂರಿನಲ್ಲಿದ್ದು, ಅಲ್ಲಿಗೂ ಅಪರೂಪಕ್ಕೆ ತೆರಳುತ್ತಿದ್ದರು. ಹಲವು ಬಾರಿ ಮನೆಯಿಂದ ಹೋಗುತ್ತಿದ್ದ ಅವರು ವಾರಗಳ ಕಾಲ ಮನೆಗೆ ಬಾರದೆ, ಎಲ್ಲೆಂದರಲ್ಲಿ ತಿರುಗಾಡುತ್ತ, ಸಿಕ್ಕಸಿಕ್ಕಲ್ಲಿ ಮಲಗುತ್ತಿದ್ದರು. ಈ ಬಾರಿ ಕೆರೆಯಲ್ಲಿ ದೇಹ ಸಿಕ್ಕಿದಾಗ ಅವರೇ ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಾಣ ಬಿಟ್ಟಿರಬಹುದೆಂದು ಅಂದುಕೊಂಡಿದ್ದರು. ಇನ್ನೊಂದೆಡೆ, ಕೆರೆಯಲ್ಲಿ ಸಿಕ್ಕಿದ ಮೃತದೇಹ ಯಾರದ್ದು ಎಂಬ ಪ್ರಶ್ನೆ ಪೊಲೀಸರಿಗೆ ಎದುರಾಗಿದ್ದು, ತನಿಖೆ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net