ಮೃತ ರೈತನ ಕುಟುಂಬಕ್ಕೆ ಎಸ್‌ಪಿ ಸಹಾಯ

0102
Published on

ಬೆಳಗಾವಿ: ಸಾಲ ಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವೈಯಕ್ತಿಕವಾಗಿ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.

ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ರೈತ ಲಕ್ಕಪ್ಪ ಸಂಗಪ್ಪ ದೊಡಮನಿ ಆತ್ಮಹತ್ಯೆ ಮಾಡಿಕೊಂಡ ರೈತ. ಕೊಳವೆಬಾವಿ ತೆಗೆಯಿಸಲು ವಿವಿಧ ಕಡೆ ಸಾಲ ಮಾಡಿಕೊಂಡಿದ್ದ. ಕೊಳವೆ ಬಾವಿಯಲ್ಲಿ ನೀರು ಬಾರದಿದ್ದಾಗ ಮನನೊಂದು ಕೊಳವೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮತ್ತು ಎಸ್‌ಪಿ ಲಕ್ಷ್ಮಣ ನಿಂಬರಗಿ ಮೃತ ರೈತನ ಮನೆಗೆ ಭೇಟಿಕೊಟ್ಟು ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಪತ್ನಿ, ಇಬ್ಬರು ಮಕ್ಕಳ ಹೊಂದಿದ್ದ ರೈತನ ಕುಟುಂಬದ ಸ್ಥಿತಿ ಚಿಂತಾಜನಕವಾಗಿತ್ತು. ಈ ಹಿನ್ನೆಲೆಯಲ್ಲಿ ಮಾನವೀಯತೆಯ ದೃಷ್ಟಿಯಿಂದ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಎಸ್ಪಿ ಲಕ್ಷ್ಮಣ ನಿಂಬರಗಿ ವೈಯಕ್ತಿಕವಾಗಿ 50 ಸಾವಿರ ರೂ. ನೆರವು ನೀಡಿದ್ದಾರೆ.

ಕೊಳವೆ ಬಾವಿ ಕೊರೆಯಿಸಿ ನೀರು ಬಾರದೆ ಇದ್ದಾಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮೃತ ದೇಹ ತೆಗೆಯುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ನಾನು ಸ್ಥಳದಲ್ಲಿದ್ದೆವು. 1ಎಕರೆ ಜಮೀನು ಹೊಂದಿದ್ದ ಮೃತ ರೈತನ ಕುಟುಂಬದ ಸ್ಥಿತಿ ನೋಡಿ ಬೇಸರವಾಗಿತ್ತು. ಮಾನವೀಯ ನೆಲಗಟ್ಟಿನ ಮೇಲೆ ನಿಂತು ರೈತನ ಕುಟುಂಬಕ್ಕೆ ನನ್ನಿಂದ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದರೆ, ಅದನ್ನು ಬಹಿರಂಗಪಡಿಸಿದ್ದು ಬೇಸರ ತಂದಿದೆ.|ಲಕ್ಷ್ಮಣ ನಿಂಬರಗಿ ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net