ಕುಮಾರಾಧಾರ ನದಿಯಲ್ಲಿ ಯುವಕನ ಶವ ಪತ್ತೆ: ಸೋಮವಾರ ನಾಪತ್ತೆಯಾಗಿದ್ದ ಪ್ರಕರಣ

deadbody
Published on

ಕಡಬ: ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಡಬ ತಾಲೂಕಿನ ಕಾಯಿಮಣ ಗ್ರಾಮದ ನಾಯಿತಡ್ಕ ಎಂಬಲ್ಲಿಂದ ನಾಪತ್ತೆಯಾಗಿದ್ದ ಯುವಕ ಶವ ಶುಕ್ರವಾರ ಸಂಜೆ ಕುಮಾರಾಧಾರ ನದಿಯಲ್ಲಿ ಪತ್ತೆಯಾಗಿದೆ. ನಾಯಿತಡ್ಕ ನಿವಾಸಿ ಸುರೇಶ್ (40) ಎಂಬ ಅವಿವಾಹಿತ ಯುವಕ ಸೋಮವಾರ ರಾತ್ರಿ ಮನೆಯಿಂದ ಹೊರಟು ಹೋಗಿ ನಾಪತ್ತೆಯಾಗಿದ್ದ. ಈತ ವಿಪರೀತ ಮದ್ಯಪಾನ ಸೇವಿಸುವ ಚಟ ಹೊಂದಿದ್ದು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಮೃತನ ಸಹೋದರ ಚಿದಾನಂದ ಬೆಳ್ಳಾರೆ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಾಗಿತ್ತು.

ಬಳಿಕ ನಡೆದ ಬೆಳವಣಿಗೆಯಲ್ಲಿ ಮಂಗಳವಾರ ಆತನ ಶರ್ಟ್ ಹಾಗೂ ಛತ್ರಿ ಕಾಪೇಜಾಲು ಹೊಳೆ ಬದಿಯಲ್ಲಿ ಪತ್ತೆಯಾಗಿತ್ತು. ಆತ ಹೊಳೆಗೆ ಬಿದ್ದು ನೆರೆ ನೀರಿಗೆ ಕೊಚ್ಚಿ ಹೋಗಿ ನೀರು ಪಾಲಾಗಿರಬಹುದು ಎನ್ನುವ ಶಂಕೆಯಲ್ಲಿ ಹೊಳೆ ನೀರಲ್ಲಿ ಅಗ್ನಿ ಶಾಮಕದಳ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು. ಬುಧವಾರ ಕೂಡಾ ಶೋಧ ಕಾರ್ಯ ನಡೆಸಲಾಗಿತ್ತು. ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಅಲ್ಲಿಗೆ ಶೋಧ ಕಾರ್ಯ ಕೈ ಬಿಡಲಾಗಿತ್ತು. ಶುಕ್ರವಾರ ಇಳಿಸಂಜೆ ಹೊತ್ತಿಗೆ ಕಾಪೆಜಾಲು ಹೊಳೆ ಕುಮಾರಧಾರ ನದಿಗೆ ಸೇರುವ ಜಾಗದಲ್ಲಿ ಪೊದೆಯಲ್ಲಿ ಸಿಲುಕಿಕೊಂಡಿರುವ ಶವ ಪತ್ತೆಯಾಗಿದೆ. ಸ್ಥಳೀಯರು ಶವ ಪತ್ತೆ ಹಚ್ಚಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶವವನ್ನು ಮೇಲೆತ್ತಲಾಗಿದೆ. ಸ್ಥಳಕ್ಕೆ ಠಾಣಾ ಎಸ್ಸೈಸಂತೋಷ್ ಹಾಗೂ ಸಿಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net