ಕಾರಿನಲ್ಲಿ ಯುವಕನ ಮೃತದೇಹ ಪತ್ತೆ, ಕೊಲೆ ಶಂಕೆ

car burns in togarsi
ತೋಗರ್ಸಿ ಬಳಿ ಸುಟ್ಟು ಕರಕಲಾಗಿದ ಪತ್ತೆಯಾದ ಇನ್ನೋವಾ ಕಾರು.
Published on

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ ಶಿವಮೊಗ್ಗ ಗಾಡಿಕೊಪ್ಪದ ಯುವಕನ ಮೃತದೇಹ ಕಾರಿನಲ್ಲಿ ಸುಟ್ಟು ಕರಕಲಾಗಿ ಶನಿವಾರ ಬೆಳಗ್ಗೆ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಮೃತ ಯುವಕ. ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಘಟನೆ ನಡೆದಿದೆ. ಆತ ಕೊಂಡೊಯ್ದ ಇನ್ನೋವಾ ಕಾರಿನ ಡಿಕ್ಕಿಯಲ್ಲಿ, ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಂತಕರು ಕಾರಿಗೆ ಬೆಂಕಿ ಹಚ್ಚಿ ಸುಟ್ಟಿರುವುದರಿಂದ ದೇಹವು ಸಂಪೂರ್ಣ ಸುಟ್ಟು ಕರಕಲಾಗಿದೆ.

ರಾತ್ರಿ ಗಾಡಿಕೊಪ್ಪದ ಮನೆಯಲ್ಲಿದ್ದ ಯುವಕನಿಗೆ, ಕೆಲ ಪರಿಚಿತರು ಆತನ ಮೊಬೈಲ್ ಫೋನ್ ಗೆ ಕರೆ ಮಾಡಿದ್ದರು. ಸ್ನೇಹಿತರೋರ್ವರ ಇನ್ನೋವಾ ಕಾರಿನಲ್ಲಿ ವೀರೇಶ್ ತೆರಳಿದ್ದರು. ನಂತರ ಮನೆಗೆ ಹಿಂದಿರುಗಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಪ್ರೇಮ ಪ್ರಕರಣ ಇದಾಗಿದ್ದು ಕೊಲೆ ಮಾಡಲಾಗಿದೆ ಎಂದು ಯುವಕ‌ನ ತಂದೆ ಆರೋಪಿಸಿ ಶಿರಾಳಕೊಪ್ಪ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಡಿವೈಎಸ್ಪಿ ಕೇಶವ್‍, ಇನ್ ಸ್ಪೆಕ್ಟರ್, ರುದ್ರೇಶ್, ಶಿರಾಳಕೊಪ್ಪ ಠಾಣೆ ಸಬ್ ಇನ್ ಸ್ಪೆಕ್ಟರ್ ರಮೇಶ್ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net