

ಪುತ್ತೂರು: ಪುತ್ತೂರು ಪಾಂಗಳಾಯಿ ಕಾಲುವೆ ಬಳಿಯಲ್ಲಿ ಕೊಳೆತ ರೀತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಪುತ್ತೂರು ನಗರ ಪೊಲೀಸರು ಮೃತ ದೇಹವನ್ನು ಶವಾಗಾರಕ್ಕೆ ವರ್ಗಾಯಿಸಿದ್ದಾರೆ.
ಪುತ್ತೂರು ಹೊರವಲಯದ ನಿವಾಸಿ ದೇವಪ್ಪ (60) ಎಂದು ಗುರುತಿಸಲಾಗಿದೆ. ಇವರು ತೋಡುಗಳಿಂದ ಏಡಿ, ಮೀನು ಹಿಡಿಯುವ ಜತೆಗೆ ಬಿದಿರಿನ ಮೆಳೆಯಿಂದ ಎಳೆ ಬಿದಿರು (ಕಣಿಲೆ) ತೆಗೆದು ಅಂಗಡಿಗಳಿಗೆ ನೀಡುವ ಕೆಲಸ ನಿರ್ವಹಿಸುತ್ತಿದ್ದರೆಂದು ಹೇಳಲಾಗಿದೆ. ಪಾಂಗಳಾಯಿ ಭಾಗದ ಬಿದಿರಿನ ಮೆಳೆಯಲ್ಲಿ ಸಿಲುಕಿ ಹಾಕಿಕೊಂಡ ಸ್ಥಿತಿಯಲ್ಲಿ ತೋಡಿಗೆ ಮೀನು ಹಿಡಿಯಲು ಹೋದ ಸ್ಥಳೀಯ ಯುವಕರಿಗೆ ದುರ್ನಾತ ಬೀರುತ್ತಿದ್ದುದನ್ನು ಗಮನಿಸಿದಾಗ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ತೆರಳಿದ ಪೊಲೀಸರು ಮೃತ ದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ವರ್ಗಾವಣೆ ಮಾಡಿದ್ದು, ಪುತ್ತೂರು ಹೊರ ವಲಯದ ವ್ಯಕ್ತಿಯೆಂದು ಗುರುತಿಸಿದ್ದಾರೆ. ಮನೆಗೆ ಹೋಗದೆ ವ್ಯಾಪಾರದಲ್ಲೇ ತೊಡಗಿಕೊಂಡ ವ್ಯಕ್ತಿ ಕಳೆದ ಹತ್ತು ದಿನಗಳಿಂದ ಮನೆಗೆ ಆಗಮಿಸಿಲ್ಲ ಎಂದು ಹೇಳಲಾಗಿದೆ.