

ಹೊನ್ನಾವರ: ತಾಲೂಕಿನ ಗೇರುಸೊಪ್ಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವ್ಯೂವ್ ಪಾಯಿಂಟ್ ಬಳಿ ಆಂಧ್ರ ಮೂಲದ ವ್ಯಕ್ತಿಯೊಬ್ಬನ ಶವ ಸೋಮವಾರ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತನನ್ನು ಆಂಧ್ರಪ್ರದೇಶದ ಕಲಕಡ ಮಂಡಲದ ತಿಪ್ಪಿಗರಿಪಲ್ಲಿ ಗ್ರಾಮದ ಭೋಜನಪು ಸಾಂಬಶಿವ (39) ಎಂದು ಗುರುತಿಸಲಾಗಿದೆ. ಈತ ಕಾಣೆಯಾದ ಬಗ್ಗೆ ಆಂಧ್ರಪ್ರದೇಶದ ಕಲಕಡ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈತನ ಮೊಬೈಲ್ ಫೋನ್ ಲೊಕೇಶನ್ ಆಧಾರದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧ ನಡೆಸಿ ಗೇರುಸೊಪ್ಪ ಅರಣ್ಯ ಪ್ರದೇಶದಲ್ಲಿ ಪತ್ತೆ ಮಾಡಿದ್ದಾರೆ.
ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆಯೇ ಕೊಲೆ ಮಾಡಿ ಆರೋಪಿಗಳು ಶವವನ್ನು ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.