

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮದ ಅಳಕೆ ಎಂಬಲ್ಲಿ ಕತ್ತು ಕೊಯ್ದುಕೊಂಡು ವೃದ್ಧ ಮೃತಪಟ್ಟ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ಸ್ಥಳೀಯ ನಿವಾಸಿ ರಾಜೀವ ಪೂಜಾರಿ (72) ಎಂಬುವರಾಗಿದ್ದಾರೆ. ಮನೆಯ ಹಿಂಬಾಗಿಲ ಸಮೀಪ ಮೃತದೇಹ ಪತ್ತೆಯಾಗಿದೆ. ಕತ್ತಿಯಿಂದ ಕುತ್ತಿಗೆ ಕೊಯ್ದಿರುವ ರೀತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಪೂಂಜಾಲಕಟ್ಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ನಿ ನಿಧನರಾದ ಬಳಿಕ ರಾಜೀವ ಪೂಜಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಹಾಗೆ ವರ್ತಿಸುತ್ತಿದ್ದರು ಮತ್ತು ವಿಪರೀತ ಮದ್ಯ ಸೇವಿಸುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ತಂದೆ ಹಾಗೂ ಮಗ ಮಾತ್ರ ಇದ್ದು ಇಬ್ಬರೂ ಮದ್ಯವ್ಯಸನಿಗಳಾಗಿದ್ದರು ಎನ್ನಲಾಗಿದೆ. ಕೈಯಲ್ಕಿದ್ದ ಕತ್ತಿಯಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.