

ಕೆ.ಎಂ.ದೊಡ್ಡಿ: ಈಚೆಗೆ ಯುವಕರು ಕುಡಿತಕ್ಕೆ ದಾಸರಾಗುತ್ತಿದ್ದು, ನಶೆಯಲ್ಲಿ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸದಸ್ಯ ಕದಲೂರು ರವಿ ಆತಂಕ ವ್ಯಕ್ತಪಡಿಸಿದರು.
ಸಮೀಪದ ಹುಲಿಗೆರೆಪುರದಲ್ಲಿ ನೂತನವಾಗಿ ಸ್ಥಾಪಿಸಿರುವ ವಿನಾಯಕ ಮದ್ಯವ್ಯಸನ ವಿಮುಕ್ತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಮೋಜಿಗಾಗಿ ಕುಡಿಯುವುದನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಯುವ ಪೀಳಿಗೆ ಒಂದಲ್ಲ ಒಂದು ಕಾರಣಕ್ಕೆ ಕುಡಿತಕ್ಕೆ ದಾಸರಾಗಿಬಿಟ್ಟಿದ್ದಾರೆ. ಇದರಿಂದ ಅವರ ಕುಟುಂಬ ಬೀದಿ ಪಾಲಾಗುತ್ತದೆ. ಬಹುಪಾಲು ಯುವಜನರು ತಾತ್ಸಾರಕ್ಕೆ ಒಳಗಾಗಿದ್ದೇವೆ ಎಂಬ ಕಾರಣದಿಂದ ಬೇಸರಗೊಂಡು ವ್ಯಸನಿಗಳಾಗಿದ್ದು, ಅವರನ್ನು ಪ್ರೀತಿ ವಾತ್ಸಲ್ಯದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಜತೆ ಕುಟುಂಬದವರು ಆತ್ಮೀಯವಾಗಿದ್ದ್ದು, ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಮದ್ಯಪಾನ ಮಾಡುವವರು ಪಾಪಿಗಳಲ್ಲ, ದುಷ್ಟರಲ್ಲ. ಯಾವುದೋ ಅನಿವಾರ್ಯ ಕಾರಣಗಳಿಂದ ಅವರು ಮದ್ಯಪಾನಕ್ಕೆ ಬಲಿಯಾಗುತ್ತಿರಬಹುದು. ಅದನ್ನು ತಡೆಗಟ್ಟಲು ಪೋಷಕರ ಪಾತ್ರ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಮದ್ಯ ವ್ಯಸನಿಗಳನ್ನು ಕುಡಿತದಿಂದ ಹೊರ ತರುವುದು ಪವಿತ್ರವಾದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಮದ್ದೂರು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ವ್ಯಸನ ವಿಮುಕ್ತಿ ಕೇಂದ್ರ ತೆರೆದಿರುವುದು ಸಂತಸದ ಸಂಗತಿ. ಮದ್ಯವ್ಯಸನಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಬಸವರಾಜು, ವಿನಾಯಕ ಮದ್ಯವ್ಯಸನಿ ಕೇಂದ್ರದ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಶಿವಲಿಂಗೇಗೌಡ, ಕಾರ್ಯದರ್ಶಿ ಮನೋಜ್, ಸದಸ್ಯರಾದ ಸಾಗರ್, ಪ್ರದೀಪ್, ಅಜಿತ್ ಮತ್ತಿತರರು ಹಾಜರಿದ್ದರು.