ದೃಢ ಸಂಕಲ್ಪದಿಂದ ಹೊಸ ಜೀವನ ಸಾಧ್ಯ: ಮದ್ಯವರ್ಜನ ಶಿಬಿರದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಿವಿಮಾತು

veerendra heggade
Published on

ಬೆಳ್ತಂಗಡಿ: ಒಬ್ಬ ವ್ಯಕ್ತಿ ಯಾವುದೇ ಅಭ್ಯಾಸಕ್ಕೆ ಬಲಿ ಬಿದ್ದರೆ ಅದರಿಂದ ಹೊರಬರಲು ಕಷ್ಟ ಸಾಧ್ಯ. ಹಿಂದಿನ ಕಾಲದಲ್ಲಿ ವ್ರತ ಮಾಡುವ ಮೂಲಕ ಕೆಟ್ಟ ಅಭ್ಯಾಸ ಬಿಡುತ್ತಿದ್ದರು. ಹಳೇ ಜೀವನ ಮರೆತು ಹೊಸ ಜೀವನ ಪ್ರಾರಂಭಿಸಬೇಕಾದರೆ ದೃಢ ಸಂಕಲ್ಪ ಮುಖ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 229ನೇ ವಿಶೇಷ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶಿಬಿರದಲ್ಲಿ ಔಷಧಿ, ಮದ್ದು, ಮಾತ್ರೆ, ಇಂಜೆಕ್ಷನ್ ಇಲ್ಲದೆ ಮನಪರಿವರ್ತನೆ ಮೂಲಕ ವ್ಯಸನ ಬಿಡಿಸುವ ಪ್ರಯತ್ನ ನಡೆಸಲಾಗುತ್ತದೆ. ಇಲ್ಲಿ ಕೊಡುವ ಸಂದೇಶಗಳನ್ನು ಮನನ ಮಾಡಿಕೊಂಡು ಹೊಸ ಜೀವನ ನಡೆಸಿದಾಗ ದೈಹಿಕ, ಮಾನಸಿಕ ಸಾಂಸಾರಿಕ, ಆರ್ಥಿಕವಾಗಿ ಬದಲಾವಣೆಯಾಗುತ್ತದೆ. ಆದುದರಿಂದ ದೃಢ ಸಂಕಲ್ಪದಿಂದ ದುಶ್ಚಟಮುಕ್ತರಾಗಿ ಕುಟುಂಬದವರೊಂದಿಗೆ ಚೆನ್ನಾಗಿ ಬಾಳಿ ಬದುಕಿರಿ ಎಂದರು.

ಶಿಬಿರದ ಕುಟುಂಬ ದಿನ ಕಾರ್ಯಕ್ರಮ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ನಡೆಸಿಕೊಟ್ಟರು. ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ವಿದ್ಯಾಧರ್, ಆರೋಗ್ಯ ಸಹಾಯಕಿ ಪ್ರೆಸಿಲ್ಲಾ ಸಹಕರಿಸಿದರು. ಮುಂದಿನ ವಿಶೇಷ ಶಿಬಿರ ಆ.19ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net