

ಹುಬ್ಬಳ್ಳಿ: ಜಗತ್ತಿನ ಎಲ್ಲ ಮಾಹಿತಿ ಸಂಗ್ರಹಿಸುವ ಪತ್ರಕರ್ತರು ತಮ್ಮ ಕುಟುಂಬದವರ ಬಗ್ಗೆ ಕಾಳಜಿ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಕಾರ್ಯಕ್ರಮದ ಮೂಲಕ ಎಲ್ಲರೂ ಒಂದೆಡೆ ಸೇರುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅಭಿಪ್ರಾಯಪಟ್ಟರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾನುವಾರ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಕುಟುಂಬ ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದಿಂದ ಪತ್ರಕರ್ತರ ಮಕ್ಕಳ ಪ್ರತಿಭೆ ಗುರುತಿಸಿ ಸ್ಫೂರ್ತಿ ನೀಡುತ್ತಿರುವುದು ಒಳ್ಳೆಯ ಕಾರ್ಯ. ಎಲ್ಲರಂತೆ ನಿಮ್ಮ ಮಕ್ಕಳು ಸಹ ಎಲ್ಲ ರಂಗಗಳಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.
ಸಮಾಜದಲ್ಲಿ ಪತ್ರಿಕಾ ಮಾಧ್ಯಮಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಪತ್ರಿಕೆಗಳು ಅನೇಕ ಸಮಾಜಮುಖಿ ಕಾರ್ಯ ಮಾಡಿದ್ದವು. ಇಂದು ಜನಜಾಗೃತಿ ಮೂಡಿಸುತ್ತಿವೆ ಎಂದರು.
ಪತ್ರಿಕಾ ಮಾಧ್ಯಮ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಸೊಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗುತ್ತಿದೆ. ಓದುವುದು, ಬರವಣಿಗೆಯಿಂದ ಮಾತ್ರ ಜ್ಞಾನ ವೃದ್ಧಿಯಾಗಲು ಸಾಧ್ಯ. ಹಾಗಾಗಿ ಪತ್ರಿಕೆಗೆ ಮಹತ್ವ ಇದ್ದೇ ಇದೆ ಎಂದರು.
ಪತ್ರಕರ್ತರ ಬೇಡಿಕೆಗಳನ್ನು ಕೇಳಲು ಸರ್ಕಾರ ಸಿದ್ಧವಿದೆ. ಅನೇಕರು ಸ್ವಂತ ಸೂರು ಇಲ್ಲದೇ ಪರದಾಡುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸಲು ತಾವು ಸಿದ್ಧ ಎಂದು ಭರವಸೆ ನೀಡಿದರು.
ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಡಾ. ಮಹಾದೇವ ಹೆಗ್ಗಣ್ಣವರ ಮಾತನಾಡಿ, ರಾಜಕೀಯ ತಜ್ಞರೊಬ್ಬರು ಕುಟುಂಬವೇ ರಾಜ್ಯದ ಆಧಾರ ಎಂದು ಹೇಳಿದ್ದಾರೆ. ಅಂದರೆ ಇದು ಕುಟುಂಬದ ಮಹತ್ವ ಎತ್ತಿ ತೋರಿಸುತ್ತದೆ. ಇಂತಹ ಕುಟುಂಬಗಳನ್ನು ಒಂದು ಕಡೆ ಸೇರಿಸುವ ಕೆಲಸ ಮಾಡಿರುವ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಅಧ್ಯಕ್ಷ ಲೊಚನೇಶ ಹೂಗಾರ, ಕುಟುಂಬಗಳು ಒಂದಾಗುವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯಲ್ಲಿ ಮೊದಲ ಬಾರಿ ಆರಂಭಿಸಲಾಯಿತು. ಪತ್ರಕರ್ತರ ಸಮಸ್ಯೆಗಳು ಬಹಳಷ್ಟಿವೆ. ಅದರಲ್ಲಿ ಮುಖ್ಯವಾಗಿ ವಸತಿ ಸಮಸ್ಯೆ. ಇದನ್ನು ಈಡೇರಿಸಲು ನಮ್ಮದೇ ಆದ ಸೊಸೈಟಿ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಮಹಾದೇವಿ ಮುಗಳಿ ಪ್ರಾರ್ಥನೆ ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರಾಚಾರ್ಯ ಕುಂದರಗಿ ಸ್ವಾಗತಿಸಿದರು.
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರು, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾ ಸಾಧಕರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷರಾದ ತನುಜಾ ನಾಯಕ, ವಿಜಯ ಹೂಗಾರ, ಕಾರ್ಯದರ್ಶಿಗಳಾದ ಡಾ. ವೀರೇಶ ಹಂಡಿಗಿ, ಅಶೋಕ ಘೋರ್ಪಡೆ, ಖಜಾಂಚಿ ಬಸವರಾಜ ಹೂಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಇತರರು ಇದ್ದರು.