

ಮಂಡ್ಯ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ವತಿಯಿಂದ ನ.20 ಮತ್ತು 21ರಂದು ಪಾಂಡವಪುರದ ಜಯಂತಿನಗರದಲ್ಲಿರುವ ಶಂಭುಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 19 ವರ್ಷದೊಳಗಿನ ವಿದ್ಯಾರ್ಥಿಗಳ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಡಿಡಿಪಿಯು ಚೆಲುವಯ್ಯ ತಿಳಿಸಿದರು.
20ರಂದು ಬೆಳಗ್ಗೆ 9ಗಂಟೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಧ್ವಜಾರೋಹಣ ನೆರವೇರಿಸುವರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಅಂತಾರಾಷ್ಟ್ರೀಯ ಶ್ರೇಯಾಂಕ ಟೆನ್ನಿಸ್ ಆಟಗಾರ ಆರ್.ನಾಗರಾಜು ಕ್ರೀಡಾಕೂಟ ಉದ್ಘಾಟಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯಾದ್ಯಂತ ಆಯ್ಕೆಯಾದ 5 ಸದಸ್ಯರನ್ನೊಳಗೊಂಡ 20 ಬಾಲಕರ ತಂಡ ಹಾಗೂ 15 ಬಾಲಕಿಯರ ತಂಡ ಭಾಗವಹಿಸಲಿದ್ದು, ಈ ಪಂದ್ಯಾವಳಿಯಲ್ಲಿ ವಿಜೇತರಾದವರನ್ನು ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಮಂಚೇಗೌಡ, ರಾಮಕೃಷ್ಣಗೌಡ, ಗುರುಸ್ವಾಮಿ, ಸುಬ್ಬ ನರಸಿಂಹ, ಸೌಮ್ಯಾ, ಗಿರೀಶ್ ಇದ್ದರು.