

ವಿಜಯಪುರ: ಪ್ರೌಢಶಾಲೆ ಸಹಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಿಸುವಂತೆ ಮನವರಿಕೆ ಮಾಡಲು ಪ್ರೌಢಶಾಲೆ ಸಹಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ನಿಯೋಗದೊಂದಿಗೆ ಡಿಡಿಪಿಐ ಉಮೇಶ ಶಿರಹಟ್ಟಿ ಅವರನ್ನು ಭೇಟಿ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ ಮಾತನಾಡಿ, ಪ್ರೌಢಶಾಲೆ ಸಹಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ನಿವಾರಣೆಗೆ ಶಿಕ್ಷಕರ ಸಂಘದಿಂದ ಸಾಕಷ್ಟು ಸ್ಪಂದಿಸಲಾಗುತ್ತಿದೆ. ಈವರೆಗೆ ಶಿಕ್ಷಣ ಇಲಾಖೆ ಕೂಡ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದು, ಇದೀಗ ಮತ್ತೆ ಕೆಲವು ಸಮಸ್ಯೆಗಳನ್ನು ಮುಂದಿಡಲಾಗುತ್ತಿದ್ದು, ಕೂಡಲೇ ಪರಿಹರಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ನಡೆಯುವ ವಿಷಯ ವೇದಿಕೆ ಕಾರ್ಯಾಗಾರದ ಸಮಯ ಮತ್ತು ದಿನ ಬದಲಾವಣೆ ಮಾಡುವುದು, ಪ್ರೌಢಶಾಲಾ ಶಿಕ್ಷಕರ ಕಡತಗಳು ವಿಲೇವಾರಿಗಾಗಿ ಪ್ರತಿ ಶನಿವಾರ ಮಧ್ಯಾಹ್ನ ಸಮಯ ನಿಗದಿಗೊಳಿಸುವ ಕಾರ್ಯವಾಗಬೇಕು ಎಂದರು.
ಸ್ಪಂದನೆ ನೀಡಿದ ಡಿಡಿಪಿಐ ಉಮೇಶ ಶಿರಹಟ್ಟಿಮಠ ಮಾತನಾಡಿ, ಪ್ರೌಢಶಾಲೆ ಸಹಶಿಕ್ಷಕರ ಸಮಸ್ಯೆಗಳಿಗೆ ಇಲಾಖೆ ಸದಾ ಸ್ಪ್ಪಂದನೆ ಮಾಡಲಿದೆ. ಶಿಕ್ಷಕರ ಅನುಕೂಲಕ್ಕಾಗಿ ಕಾರ್ಯಾಗಾರದ ಸಮಯ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯದರ್ಶಿ ಮಲ್ಲನಗೌಡ ಹಡಲಗೇರಿ, ಉಪಾಧ್ಯಕ್ಷ ಶ್ರೀಪಾದ ಜೋಶಿ, ಕೋಶಾಧ್ಯಕ್ಷ ಸಿದ್ದು ಹಂಚಿನಾಳ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ತುಂಗಳ, ವಿಜಯಪುರ ನಗರ ಅಧ್ಯಕ್ಷ ಅಶೋಕ ಬಿರಾದಾರ, ಬಬಲೇಶ್ವರ ತಾಲೂಕು ಅಧ್ಯಕ್ಷ ಸಂದೀಪ ದೇಶಪಾಂಡೆ, ಎಂ.ಎಸ್.ಅವಟಿ, ಉಪನಿರ್ದೇಶಕರ ಕಾರ್ಯಾಲಯದ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ, ವಿಷಯ ಪರಿವೀಕ್ಷಕ ಪಿ.ಕೆ.ಬಿರಾದಾರ ಮತ್ತಿತರರಿದ್ದರು.